ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸುಮಲತಾರ ಪರ ಅಲೆ ಎಬ್ಬಿಸುತ್ತಿದ್ದಾರೆ. ಇವತ್ತು ಈ ಜೋಡೆತ್ತುಗಳನ್ನು ಗೆಲ್ಲಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆ. ವಿಜಯದ ಕಹಳೆಯನ್ನು ಸುಮಲತಾ ಅಂಬರೀಶ್ ಅವರೇ ಮೊಳಗಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲ ಪರ್ಸೆಂಟೆಜ್ ಸೈಡ್‍ಗೆ ಇಟ್ಟು ನಾವು ಚುನಾವಣೆ ಮಾಡಬೇಕು ಅಂತ ಸಚಿವ ರೇವಣ್ಣ ಹೇಳಿದ್ದಾರೆ. ಆ ಸ್ಕೀಮ್‍ನಲ್ಲಿ ಇವತ್ತು ಇವರು ಚುನಾವಣೆ ಮಾಡ್ತಿರೋದು. ಅದಕ್ಕಾಗಿಯೇ ಇವತ್ತು ಇವರು ಐಟಿ ರೇಡ್ ಮಾಡಿಸಿಕೊಳ್ಳುತ್ತಾ ಇರೋದು ಎಂದರು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಿದ್ದರಾಮಣ್ಣ 2 ಲಕ್ಷ ವೋಟುಗಳು ಪಡೆದಿದ್ದರು. ಹೀಗಾಗಿ ವೋಟ್ ಡಿವೈಡ್ ಮಾಡಿ ಮತದಾರರನ್ನು ಗೊಂದಲಕ್ಕೀಡು ಮಾಡಬಾರದು ಅಂತ ಮಂಡ್ಯದಲ್ಲಿ ಅಭ್ಯರ್ಥಿ ಹಾಕಿಲ್ಲ. ಯಾಕಂದ್ರೆ ಸುಮಲತಾ ಅವರು ಇಲ್ಲಿ ಅವರ ಸ್ವಂತ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿ ಅವರಿಗೆ ನಾವು ಬೆಂಬಲ ಮಾಡುತ್ತಿದ್ದೇವೆ. ದರ್ಶನ್ ಹಾಗೂ ಯಶ್ ಕೂಡ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಆದರಿಂದ ಈ ಜೋಡೆತ್ತುಗಳನ್ನು ಗೆಲ್ಲಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆ. ವಿಜಯದ ಕಹಳೆಯನ್ನು ಸುಮಲತಾ ಅಂಬರೀಶ್ ಅವರೇ ಮೊಳಗಿಸಲಿದ್ದಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಸುಮಲತಾ ಅಂಬರೀಶ್ ನೇರವಾಗಿ ಚಾಲೆಂಜ್ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ, ಒಬ್ಬ ಮಹಿಳೆ ತಮ್ಮ ವಿರುದ್ಧದ ಹೇಳಿಕೆಗಳಿಗೆ ಶಾಂತಿಯುತವಾಗಿ, ಸಮರ್ಥವಾಗಿ ಉತ್ತರ ಕೊಡುತ್ತಿದ್ದಾರೆ. ಅವರು ಏನು ಗುರಿ ಹೊಂದಿದ್ದಾರೆ ಅದಕ್ಕೆ ಜನರು ಆಶೀರ್ವಾದ ಮಾಡೇ ಮಾಡುತ್ತಾರೆ. ಅವರ ಚಿಹ್ನೆ ಕಹಳೆ ಆಗಿರುವುದರಿಂದ ಈ ಚುನಾವಣೆಯಲ್ಲಿ ಅವರು ಕಹಳೆಯನ್ನು ಮೊಳಗಿಸಿಯೇ ಮೊಳಗಿಸಲಿದ್ದಾರೆ ಎಂದರು.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಕುವ ಯೋಗ್ಯತೆ ಇಲ್ಲ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಇವತ್ತು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶವನ್ನೇ ಕಳೆದುಕೊಂಡಿದೆ. ಬೆಂಗಳೂರು ಉತ್ತರಕ್ಕೆ ಇವರಿಗೆ ಅಭ್ಯರ್ಥಿ ಹಾಕುವ ಯೋಗ್ಯತೆ ಇಲ್ಲ. ಕೊನೆಗೆ ಅಭ್ಯರ್ಥಿ ಇಲ್ಲ ಅಂತ ಈಗ ಕೃಷ್ಣ ಭೈರೇಗೌಡರನ್ನು ಹಾಕಿದ್ದಾರೆ. ಇವರು ಅವರ ಕಾಲಿಗೆ, ಅವರು ಇವರ ಕಾಲಿಗೆ ಬಿದ್ದು ಅಭ್ಯರ್ಥಿ ಹಾಕಿದ್ದಾರೆ. ಅವರ ಯೋಗ್ಯತೆ ಏನು ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.