ಉಡುಪಿ: ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂದು ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ನಾವು ಬೆಂಬಲಿಸುತ್ತೇವೆ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ.
ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಅಂದ್ರು. ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ನಾವು ಎಲ್ಲಾ ಸಚಿವರನ್ನು ಗಮನಿಸಿ ವರದಿಯನ್ನು ತರಿಸಿಕೊಳ್ತೇವೆ. ಬಳಿಕ ಸರ್ವೇಗಳನ್ನು ನಡೆಸುತ್ತೇವೆ. ಅದರ ಆಧಾರದ ಮೇಲೆ ವಸ್ತುಸ್ಥಿತಿ ತಿಳ್ಕೊಂಡು ಮುಂದಿನ ತೀರ್ಮಾನ ಮಾಡ್ತೇವೆ ಅಂತಾ ಹೇಳಿದ್ರು.
ಕಲ್ಲಡ್ಕ ಗಲಭೆ ಬಗ್ಗೆ ಮಾತನಾಡಿದ ಅವರು, ಇಂತಹ ಘಟನೆ ಆಗಬಾರದು. ಕರಾವಳಿಯಲ್ಲಿ ಇತ್ತೀಚೆಗೆ ಇದು ಹೆಚ್ಚಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಇದಕ್ಕೆ ಪ್ರಚೋದನೆ ಮಾಡುತ್ತಿದ್ದಾರೆ ಅಂದ್ರು.
ಇದೇ ಸಂದರ್ಭದಲ್ಲಿ ಯುಡಿಯೂರಪ್ಪ ದಲಿತರ ಮನೆಗೆ ಭೇಟಿ ವಿಚಾರ ಕುರಿತು ಮಾತನಾಡಿ, ನಾಟಕೀಯ ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸರ್ಕಾರ ಇರೋವಾಗ ದಲಿತರ ಸಮಸ್ಯೆಗೆ ಸ್ಪಂದಿಸಿಲ್ಲ. ಇದು ಕೇವಲ ರಾಜಕಾರಣ ಅಂತಾ ಇಡೀ ಜಗತ್ತಿಗೆ ಗೊತ್ತಾಗ್ತಾ ಇದೆ ಎಂದು ಪರಮೇಶ್ವರ್ ಹೇಳಿದರು.