ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದರೆ, ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತದೆ ಎಂದು ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಎಚ್ಚರಿಕೆ ನೀಡಿದರು.
ಮುಡಾ ಹಗರಣದ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಹಿನ್ನಡೆ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ಅಹಿಂದ ಸಂಘಟನೆಯಿಂದ ತುರ್ತು ಸಭೆ ನಡೆಯಿತು.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಮುತ್ತಣ್ಣ ಶಿವಳ್ಳಿ, ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದರೆ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ಹೊತ್ತಿ ಉರಿಯುತ್ತದೆ. ಜನ ದಂಗೆ ಏಳುತ್ತಾರೆ. ಮನುವಾದಿಗಳು, ಜಾತಿವಾದಿಗಳ ಮನೆ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಅಹಿಂದ ಯಾವತ್ತೂ ಸಿದ್ದರಾಮಯ್ಯ ಬೆನ್ನಿಗೆ ಇರುತ್ತೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಸಿದ್ದರಾಮಯ್ಯಗೆ ಬೆಂಬಲ ನೀಡಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸುತ್ತೇವೆ. ದೇಶದಲ್ಲಿ ಸಿದ್ದರಾಮಯ್ಯ ಅಹಿಂದ ನಾಯಕರು. ಕಾಂಗ್ರೆಸ್ ಹೈಕಮಾಂಡ್ ಅವರ ರಾಜೀನಾಮೆಗೆ ಒತ್ತಡ ಹಾಕಬಾರದು ಎಂದು ಹೇಳಿದರು.
ಇದು ಮನುವಾದಿಗಳು, ಬಿಜೆಪಿಯವರು ಮಾಡುತ್ತಿರುವ ಕುತಂತ್ರ. ಇದನ್ನು ಅಹಿಂದ ಸಂಘಟನೆ ತೀವ್ರ ವಿರೋಧ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.