ಇಡೀ ಸಮುದಾಯ ಲಾರೆನ್ಸ್‌ ಬಿಷ್ಣೋಯ್ ಜೊತೆಗಿದೆ: ಮೌನ ಮುರಿದ ಕುಟುಂಬ

Public TV
2 Min Read
Jailed gangster Lawrence Bishnoi today claimed responsibility for the killing of Khalistani terrorist Sukhdool Singh in Canada

ನವದೆಹಲಿ: ಜೈಲಲ್ಲಿರುವ ದರೋಡೆಕೋರ ಲಾರೆನ್ಸ್‌ ಬಿಷ್ಣೋಯ್ (Lawrence Bishnoi) ವಿಚಾರವಾಗಿ ಆತನ ಕುಟುಂಬ ಮೌನಮುರಿದಿದೆ. ಅವನ ಬೆಂಬಲಕ್ಕೆ ನಮ್ಮ ಇಡೀ ಸಮುದಾಯ ನಿಂತಿದೆ ಎಂದು ಆತನ ಸೋದರಸಂಬಂಧಿ ರಮೇಶ್ ಬಿಷ್ಣೋಯ್ ಹೇಳಿದ್ದಾನೆ.

ನಟ ಸಲ್ಮಾನ್ ಖಾನ್ ( Salman Khan), ಕೃಷ್ಣಮೃಗ (Black Buck ) ಬೇಟೆ ಪ್ರಕರಣದಲ್ಲಿ ಸಮುದಾಯದ ಕ್ಷಮೆಯಾಚಿಸಬೇಕು. ಅವರ ಕುಟುಂಬ ನಮ್ಮ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದೆ. ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ಕೃಷ್ಣಮೃಗ ಘಟನೆ ಸಂಭವಿಸಿದಾಗ ಬಿಷ್ಣೋಯ್ ಸಮುದಾಯದ ಪ್ರತಿಯೊಬ್ಬ ಸದಸ್ಯರು ಕೋಪಗೊಂಡಿದ್ದರು. ಕೃಷ್ಣಮೃಗಗಳನ್ನು ಉಳಿಸಲು ಯಾವ ತ್ಯಾಗ ಮಾಡಲು ನಮ್ಮ ಜನ ಸಿದ್ಧರಾಗಿದ್ದಾರೆ ಎಂದು ಆತ ಹೇಳಿದ್ದಾನೆ.

salman khan 3 1

ನಮ್ಮ ಸಮಾಜವು ವನ್ಯಜೀವಿಗಳು ಮತ್ತು ಮರಗಳನ್ನು ಪ್ರೀತಿಸುತ್ತದೆ. ನಮ್ಮ 363 ಪೂರ್ವಜರು ಮರಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಾಗ, ಪ್ರತಿ ಬಿಷ್ಣೋಯಿ ರಕ್ತ ಕುದಿಯುತ್ತಿತ್ತು. ಅದನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಬಿಟ್ಟಿದ್ದೇವೆ. ಆದರೆ ಸಮುದಾಯವನ್ನು ಗೇಲಿ ಮಾಡಿದರೆ ಸಮಾಜಕ್ಕೆ ಸಿಟ್ಟು ಬರುವುದು ಸಹಜ, ಇಂದು ಇಡೀ ಬಿಷ್ಣೋಯಿ ಸಮುದಾಯ ಈ ವಿಚಾರದಲ್ಲಿ ಲಾರೆನ್ಸ್ ಜೊತೆ ನಿಂತಿದೆ ಎಂದು ವಾದಿಸಿದ್ದಾನೆ.

ಲಾರೆನ್ಸ್ ಗ್ಯಾಂಗ್ ಹಣಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಅವರ ತಂದೆ ಸಲೀಂ ಖಾನ್ ಹೇಳಿದ್ದಾರೆ. ನಾನು ಅವರಿಗೆ ನೆನಪಿಸಲು ಬಯಸುತ್ತೇನೆ, ಅವರ ಮಗ ಸಮುದಾಯದ ಮುಂದೆ ಚೆಕ್ ಪುಸ್ತಕವನ್ನು ತಂದು, ತೆಗೆದುಕೊಳ್ಳಿ ಎಂದಾಗ ನಮ್ಮ ಸಮುದಾಯ ನಿರಾಕರಿಸಿತ್ತು. ನಾವು ಹಣಕ್ಕಾಗಿ ಹಸಿದಿದ್ದರೆ ಆ ಸಮಯದಲ್ಲೇ ತೆಗೆದುಕೊಳ್ಳುತ್ತಿದ್ದೆವು ಎಂದು ಆಕ್ರೋಶ ಹೊರ ಹಾಕಿದ್ದಾನೆ.

2015 ರಿಂದ ಅನೇಕ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್, ಸದ್ಯ ಜೈಲಿನಲ್ಲಿದ್ದಾನೆ. ಕೃಷ್ಣಮೃಗ ಬೇಟೆಯಾಡಿ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದ ಕಾರಣಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವುದಾಗಿ ಆತ ಘೋಷಿಸಿದ್ದ. ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಅನೇಕ ಬೆದರಿಕೆಗಳು ಬಂದಿದ್ದವು. ಇದಾದ ಬಳಿಕ ನಟನ ಅಪಾರ್ಟ್ಮೆಂಟ್ ಮತ್ತು ಫಾರ್ಮ್‌ಹೌಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

1998ರಲ್ಲಿ ಜೋಧ್‌ಪುರದಲ್ಲಿ ಚಿತ್ರೀಕರಣದ ಸಮಯದಲ್ಲಿ ಬಿಷ್ಣೋಯ್ ಸಮುದಾಯದಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Share This Article