– ಯಾವುದೇ ಕಾರ್ಯಕಲಾಪಕ್ಕೆ ಅವಕಾಶ ಇಲ್ಲ
ಬೆಂಗಳೂರು: ಸದನ ಗುರುವಾರಕ್ಕೆ ಮುಂದೂಡಲಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದನ ಗುರುವಾರ ಮುಂದೂಡಲಾಗಿದೆ. ನಾವು ಇವತ್ತು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ತೀರ್ಮಾನ ಮಾಡಿದ್ದೇವು. ಆದ್ರೆ ಗುರುವಾರ ಸಿಎಂ ಅವರೇ ವಿಶ್ವಾಸ ಮತಯಾಚಿಸುತ್ತೇನೆ ಎಂದರು. ಹೀಗಾಗಿ ಇವತ್ತಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಗುರುವಾರ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ಸಮಯ ಕೊಟ್ಟಿದಾರೆ ಎಂದು ಹೇಳಿದರು.
ನಾವು ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲು ಅವರೇ ವಿಶ್ವಾಸ ಮತಯಾಚಿಸುತ್ತೇವೆ ಎಂದರು. ಹೀಗಾಗಿ ಅವರಿಗೆ ಅವಕಾಶ ನೀಡೋಣ. ಅದರಲ್ಲಿ ಏನು ವ್ಯತ್ಯಾಸ ಆಗಲ್ಲ. ಗುರುವಾರದವರೆಗೂ ಯಾವುದೇ ಕಾರ್ಯಕಲಾಪಗಳನ್ನು ನಡೆಸದಂತೆ ನಾವು ಮನವಿ ಮಾಡಿದ್ದೇವೆ. ಅದರಂತೆ ಸ್ಪೀಕರ್ ಅವರು ಕೂಡ ಈ ಮಾತಿಗೆ ಒಪ್ಪಿದ್ದಾರೆ ಎಂದರು.
ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಗುರುವಾರ ಸಿಎಂ ಬಹುಮತ ಸಾಬೀತು ಮಾಡಲ್ಲ. ಸಿಎಂ ರಾಜೀನಾಮೆ ಕೊಟ್ಟು ಹೋಗಲಿ. ಗುರುವಾರ ಕುಮಾರಸ್ವಾಮಿ ಅವರಿಗೆ ಹಿನ್ನಡೆ ಆಗುತ್ತೆ ಎಂದು ಹೇಳಿದರು. ಬಳಿಕ ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾನು ಏನೂ ಹೇಳಲ್ಲ. ನಮಗೆ ರಿವರ್ಸ್ ಆಪರೇಷನ್ ಭಯ ಇಲ್ಲ. ರಿವರ್ಸ್ ಆಪರೇಷನ್ ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ಗುರುವಾರದವರೆಗೂ ನಮ್ಮ ಶಾಸಕರು ರೆಸಾರ್ಟಿ ನಲ್ಲೇ ಇರುತ್ತಾರೆ. ಸುಪ್ರೀಂಕೋರ್ಟ್ ತೀರ್ಪು ಕಾದು ನೋಡುತ್ತೇವೆ ಎಂದು ಬಿಎಸ್‍ವೈ ಪ್ರತಿಕ್ರಿಯಿಸಿದರು.