ದಾವಣಗೆರೆ: ಆದಿಲ್ ಸಾವಿನ ಬಗ್ಗೆ ನಮಗೆ ಯಾವುದೇ ರೀತಿಯ ಅನುಮಾನ ಇಲ್ಲ ಎಂದು ಮೃತ ಆದಿಲ್ ತಂದೆ ಕಲೀಂವುಲ್ಲಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಿಲ್‌ಗೆ ಯಾವುದೇ ರೀತಿಯ ಮೂರ್ಛೆ ರೋಗ ಇರಲಿಲ್ಲ. ಆತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಆತ ಯಾವುದೇ ಮಟ್ಕಾ ಆಡ್ತಾ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ- ಕುಟುಂಬಸ್ಥರಿಂದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ
ಮಗ ಸಾವನ್ನಪ್ಪಿದ್ದಕ್ಕೆ ನ್ಯಾಯ ಕೇಳಲು ಬಂದಿದ್ದೆವು. ಈ ವೇಳೆ ಯಾರು ಬಂದು ಕಲ್ಲು ಹೊಡೆದಿದ್ದಾರೋ ನನಗೆ ಗೊತ್ತಿಲ್ಲ. ನಾನು ನನ್ನ ಮಗನನ್ನ ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ ಆಗುತ್ತಾ? ಸರ್ಕಾರ ನಮಗೆ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?: ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದ್ದಕ್ಕಿದ್ದಂತೆ ಆರೋಪಿಗೆ ಬಿಪಿ ಲೋ ಆದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಬಳಿಕ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಜೀಪನ್ನು ಧ್ವಂಸಗೊಳಿಸಿ, ಪಲ್ಟಿ ಮಾಡಿ ಆಕ್ರೋಶ ಹೊರಹಾಕಿದ್ದರು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದರು.
ಎಸ್ಪಿ ಉಮಾ ಪ್ರಶಾಂತ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಬಳಿಕ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ನಮ್ಮ ಪೊಲೀಸ್ ಠಾಣೆಯಲ್ಲಿ 6 ರಿಂದ 7 ನಿಮಿಷ ಕೂಡ ಇರಲಿಲ್ಲ ಎಂದಿದ್ದರು. ಇದನ್ನೂ ಓದಿ: ಚನ್ನಗಿರಿ ಪ್ರಕರಣ ಲಾಕಪ್ ಡೆತ್ ಅಲ್ಲ, ಆತನಿಗೆ ಮೂರ್ಛೆ ರೋಗ ಇತ್ತು: ಸಿದ್ದರಾಮಯ್ಯ