ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ತಡ ರಾತ್ರಿ ಮಹತ್ವದ ಬೆಳವಣಿಗೆಗಳು ನಡೆದಿದ್ದು ಬಂಡಾಯದ ಬಾವುಟ ಹಾರಿಸಿದ್ದ ಎಲ್ಲ ಶಾಸಕರು ಏಕನಾಥ್ ಶಿಂಧೆ ತಮ್ಮ ನಾಯಕ ಎಂದು ಘೋಷಣೆ ಮಾಡಿದ್ದಾರೆ.
ಗುರುವಾರ ರಾತ್ರಿ ಗುವಾಹಟಿಯಲ್ಲಿರುವ ರ‍್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಸಭೆ ನಡೆಸಿದ ಅತೃಪ್ತ ಶಾಸಕರು ಬಂಡಾಯದ ನೇತೃತ್ವದ ಹೊತ್ತಿರುವ ಏಕನಾಥ ಶಿಂಧೆ ಅವರನ್ನು ನಾಯಕರಾಗಿ ಒಪ್ಪಿಕೊಳ್ಳುತ್ತಿರುವುದಾಗಿ ಹೇಳಿದ ವೀಡಿಯೋ ಬಿಡುಗಡೆಯಾಗಿದೆ. ಈ ವೀಡಿಯೋದಲ್ಲಿ ಮಾತನಾಡಿರುವ ಏಕನಾಥ್ ಶಿಂಧೆ, ತಮ್ಮ ಜೊತೆಗೆ ಈಗಾಗಲೇ 37 ಶಿವಸೇನೆ ಶಾಸಕರು ಸೇರಿದಂತೆ ಒಟ್ಟು 55 ಮಂದಿ ಶಾಸಕರಿದ್ದು ಇನ್ನು ಇಬ್ಬರು ಶಾಸಕರು ನಮ್ಮ ತಂಡವನ್ನು ಸೇರಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?
ಈ ಮೂಲಕ ಶಿಂಧೆ, ಶಿವಸೇನೆಯ ಎರಡನೇ ಮೂರು ಭಾಗದ ಶಾಸಕರು ಪಕ್ಷದಿಂದ ಹೊರಬಂದಿದ್ದು, ಶಿವಸೇನೆ ಒಡೆದು ಎರಡು ಹೋಳಾಗುವ ಮುನ್ಸೂಚನೆ ನೀಡಿದ್ದಾರೆ. ಅಲ್ಲದೆ, ನಮ್ಮ ಐತಿಹಾಸಿಕ ನಿರ್ಧಾರವನ್ನು ದೇಶದ ಅತಿದೊಡ್ಡ ರಾಷ್ಟ್ರೀಯ ಪಕ್ಷ ಶ್ಲಾಘಿಸಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಬಗ್ಗೆ ಮಾತಾಡಿದ್ದಾರೆ. ಈ ಮಧ್ಯೆ ರೆಬೆಲ್ ಶಾಸಕರು ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಯಾವುದೇ ಆಫರ್‌ಗಳನ್ನು ನೀಡಿದರು ಒಪ್ಪದ ಬಂಡಾಯ ಶಾಸಕರು ಮಾತುಕತೆಯಿಂದ ದೂರ ಸರಿದಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ
ಪಕ್ಷ ಉಳಿಸಿಕೊಳ್ಳಬೇಕಾ ಅಥವಾ ಸರ್ಕಾರ ಉಳಿಸಿಕೊಳ್ಳಬೇಕಾ ಎನ್ನುವ ಡೋಲಾಯಮಾನ ಪರಿಸ್ಥಿತಿಯಲ್ಲಿ ಉದ್ದವ್ ಠಾಕ್ರೆ ಇದ್ದಾರೆ. ಉದ್ದವ್ ಠಾಕ್ರೆ ಪ್ರಯತ್ನಕ್ಕೆ ಎನ್‍ಸಿಪಿ ಸಾಥ್ ನೀಡಿದ್ದು, ಠಾಕ್ರೆ ಜೊತೆಗೆ ಕಡೆಯವರೆಗೂ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹೋರಾಟ ಮಾಡುವುದಾಗಿ ತಿಳಿಸಿದೆ. ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಸರ್ಕಾರ ಮುಂದುವರಿಯಲಿದೆ. ಶಿವಸೇನೆಯ ಬಂಡಾಯ ಅದು ಆಂತರಿಕ ವಿಚಾರ, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಎಂದು ಎನ್‍ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.