ಇಸ್ಲಾಮಾಬಾದ್: ನಾವು ಬೇರೆ ದೇಶಗಳಿಂದ ಭಿಕ್ಷೆ ಬೇಡುತ್ತಿದ್ದೇವೆ. ನಾಚಿಕೆಯಿಂದ ತಲೆ ಬಾಗುತ್ತೇವೆ ಎಂದು ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಬೇಸರದಿಂದ ನುಡಿದಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಉನ್ನತ ರಫ್ತುದಾರರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಆರ್ಥಿಕ ಸಹಾಯ ಕೇಳಲು ದೇಶಗಳಿಗೆ ಪ್ರಯಾಣಿಸಬೇಕಾಯಿತು ಎಂದು ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಕ್ಯೂಬಾಗೆ ತೈಲ ಪೂರೈಸುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ; ಮೆಕ್ಸಿಕೊ ಮೇಲೆ ಒತ್ತಡ ಹೆಚ್ಚಿಸಿದ ಟ್ರಂಪ್
ಪಾಕಿಸ್ತಾನದ ವಿದೇಶಿ ಮೀಸಲು ಸ್ಥಿತಿ ಸುಧಾರಿಸಿದೆ ಎಂದು ಹೇಳಿದ ಷರೀಫ್, ಪ್ರಸ್ತುತ ಪರಿಸ್ಥಿತಿಯೆಂದರೆ ವಿದೇಶಿ ವಿನಿಮಯದ ಮೀಸಲು ಬಹುತೇಕ ದ್ವಿಗುಣಗೊಂಡಿದೆ. ನಮ್ಮ ಸ್ನೇಹಿತರು ಮತ್ತು ದೇಶಗಳ ಸಾಲಗಳು ಇದರಲ್ಲಿ ಸೇರಿವೆ. ಆದರೆ, ಸಾಲ ತೆಗೆದುಕೊಳ್ಳಲು ನಾವು ಬೇರೆಯವರ ಮುಂದೆ ತಲೆಬಾಗುತ್ತೇವೆ ಎಂದು ತಿಳಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ನಾನು ಹಣಕ್ಕಾಗಿ ಜಗತ್ತನ್ನು ಸುತ್ತಿ ಭಿಕ್ಷೆ ಬೇಡಿದಾಗ ನಮಗೆ ನಾಚಿಕೆಯಾಗುತ್ತದೆ. ಸಾಲ ತೆಗೆದುಕೊಳ್ಳುವುದು ನಮ್ಮ ಸ್ವಾಭಿಮಾನದ ಮೇಲೆ ದೊಡ್ಡ ಹೊರೆಯಾಗಿದೆ. ನಮ್ಮ ತಲೆಗಳು ನಾಚಿಕೆಯಿಂದ ಬಾಗುತ್ತವೆ. ಅವರು ನಮಗೆ ಮಾಡಲು ಬಯಸುವ ಅನೇಕ ವಿಷಯಗಳಿಗೆ ನಾವು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಅಂತ ಷರೀಫ್ ಮಾತನಾಡಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಯುದ್ಧಕ್ಕೆ ಸಿಗುತ್ತಾ ಮುಕ್ತಿ? – ಶಾಂತಿ ಮಾತುಕತೆಗೆ ಉಕ್ರೇನ್‌ಗೆ ರಷ್ಯಾ ಆಹ್ವಾನ
ದೇಶದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಯೋಜನೆಗಾಗಿ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲವನ್ನು ಪಡೆದುಕೊಂಡಿದೆ. ಪಾಕಿಸ್ತಾನ ಇತ್ತೀಚೆಗೆ ಸಾಲ ಮತ್ತು ಪ್ರತ್ಯೇಕ ಹವಾಮಾನ ಸಂಬಂಧಿತ ಹಣಕಾಸು ಯೋಜನೆಯ ಭಾಗವಾಗಿ IMFನಿಂದ 1.2 ಬಿಲಿಯನ್ ಡಾಲರ್ ಪಡೆದಿದೆ. ಈ ನಿಧಿಯು ಪಾಕಿಸ್ತಾನವು ಸಾಲವನ್ನು ಮರುಪಾವತಿಸಲು ಮತ್ತು ತನ್ನ ವಿದೇಶಿ ಮೀಸಲುಗಳನ್ನು ನಿರ್ಮಿಸಲು ಸಹಾಯ ಮಾಡಿದೆ.

