ಮಂಡ್ಯ: ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿಗೆ ಇಳಿದಿದ್ದೇವು. ನಾವು ಅವರ ಮೇಲೆ, ಅವರು ನಮ್ಮ ಮೇಲೆ ಆರೋಪ, ಪ್ರತ್ಯಾರೋಪ ಮಾಡಿದ್ದು ನಿಜ. ಆದರೆ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಅಂತಾ ಹೈಕಮಾಂಡ್ ಸಮ್ಮಿಶ್ರ ಸರ್ಕಾರ ರಚಿಸುವಂತೆ ಆದೇಶ ನೀಡಿತ್ತು. ಹೀಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸೋಲನ್ನು ಮತ್ತೆ ನೆನಪಿಸಿಕೊಂಡರು. ನಮಗೆ ವೋಟ್ ಹೆಚ್ಚು ಬಂದಿದ್ದರೂ, ಬಿಜೆಪಿಗೆ ಸೀಟ್ ಹೆಚ್ಚು ಬಂದಿವೆ. ಬಿಜೆಪಿಯವರು ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದಾರೆ. ಅವರು ವಚನ ಭ್ರಷ್ಟರಾಗಿದ್ದು, ಕೋಮುವಾದಿ ಪಕ್ಷ ಮತ್ತೆ ಭಾರತದಲ್ಲಿ ಆಡಳಿತಕ್ಕೆ ಬರಬಾರದು. ಇದಕ್ಕೆ ಕರ್ನಾಟಕದಿಂದಲೇ ಉತ್ತರ ಕೊಡಲು ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಹಂಚಿಕೆ ಮಾಡಿಕೊಂಡಿದ್ದೇವೆ ಎಂದರು.
ದೇಶದಲ್ಲಿ ಜಾತ್ಯಾತೀತ ಮತ ವಿಭಜನೆ ಆಗುತ್ತಿರುವುದರಿಂದ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ನೆಮ್ಮದಿಯಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಮೈತ್ರಿ ಚುನಾವಣೆ ದೇಶಕ್ಕೆ ಮಾದರಿ ಆಗಲಿದ್ದು, ಲೋಕಸಭಾ ಚುನಾವಣೆಯಲ್ಲಿ ಇದನ್ನೇ ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಹಿಂದಿ ಡೈಲಾಗ್ ಹೇಳಲು ತಡವರಿಸಿದ ಮಾಜಿ ಸಿಎಂ:
ನಾ ಕಾವೋಂಗಾ, ನಾ ಕಾನೆದೋಂಗಾ, ಮೈ ಭಾರತ್ ಕಾ ಚೌಕಿದಾರ್ ಅಂತಾ ಹೇಳಲು ಸಿದ್ದರಾಮಯ್ಯ ತಡವರಿಸಿದ್ದಾರೆ. ಎಷ್ಟೇ ಯತ್ನಿಸಿದರೂ ಹೇಳಲು ಸಾಧ್ಯವಾಗಲಿಲ್ಲ. ಬಳಿಕ ಪಕ್ಕದಲ್ಲಿಯೇ ಸಚಿವ ಜಮೀರ್ ಅಹ್ಮದ್ ಅವರ ಸಹಾಯದಿಂದ ಕನ್ನಡಲ್ಲಿಯೇ, ನಾನು ತಿನ್ನಲ್ಲ ತಿನ್ನವುದಕ್ಕೂ ಬಿಡುವುದಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮುಂಚೆ ದೇಶದಲ್ಲಿ ಇಷ್ಟು ಕೆಟ್ಟ ಪರಿಸ್ಥಿತಿ ಯಾವತ್ತು ಇರಲಿಲ್ಲ. ಅವರ ಆಡಳಿತ ಅವಧಿಯಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಗ್ಯಾಸ್ ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಮುಂದೆ ಡಾಲರ್ ಎದುರು ಕುಸಿಯುತ್ತಿದೆ. ಅವರು ಹೇಳಿದಂತೆ ಅಚ್ಚೇದಿನ್ ಬರಲೇ ಇಲ್ಲ. ದೇಶದಲ್ಲಿ ಸದ್ಯ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಾಗಿದೆ. ನೋಟ್ ಬ್ಯಾನ್ ಮಾಡಿದಾಗ ಕಪ್ಪು ಇದ್ದವರ ನಿದ್ದೆಗೆಡಿಸುತ್ತೇವೆ ಅಂತಾ ಭರವಸೆ ನೀಡಿದ್ದರು. ಆದರೆ ಹಳೇ ಹಣದಲ್ಲಿ ಶೇ.97 ಹಣ ವಾಪಸ್ ಬಂದಿದೆ. ಹಾಗಾದರೆ ಕಪ್ಪು ಹಣ ಏನಾಯಿತು ಎಂದು ಪ್ರಶ್ನಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv