ಮೈಸೂರು: ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ, ಯಾವ ಪಕ್ಷದವರು ಗೊಂದಲ ಉಂಟುಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕೆಗಳಿಗೆ ತೀರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇಲ್ಲಿಯವರೆಗೂ ದೇಶದ ಯಾವ ರಾಜ್ಯಕ್ಕೂ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಈಗಷ್ಟೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಘೋಷಣೆಯಾಗುವ ಭರವಸೆ ಇದೆ. ಯಾವ ಪಕ್ಷದವರು ಗೊಂದಲ ಉಂಟು ಮಾಡುವ ಅಗತ್ಯವಿಲ್ಲ. ಯಾರು ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ದಿವಂತರಾಗಿದ್ದು, ಅವರಿಗೆ ಎಲ್ಲಾ ರಾಜ್ಯದ ಪರಿಸ್ಥಿತಿ ಗೊತ್ತಿದೆ. ಶೀಘ್ರದಲ್ಲಿ ಪರಿಹಾರ ಘೋಷಣೆ ಮಾಡುತ್ತಾರೆ ಎಂದು ಮಾತಿನ ಚಾಟಿ ಬೀಸಿದರು.
ಇದೇ ವೇಳೆ ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿ, ಯಾರ ಫೋನ್ ಕದ್ದಾಲಿಕೆ ಆಗಿದ್ದರು ಸತ್ಯ ಹೊರಬರಲಿದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ನಂತರ ಆ ಬಗ್ಗೆ ಮಾತನಾಡುತ್ತೇನೆ. ಸುತ್ತೂರು ಶ್ರೀಗಳ ಫೋನ್ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಹಾಗೆಯೇ ಬಂಡೀಪುರ ರಾತ್ರಿ ಸಂಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಕೋರ್ಟ್ ಮೀರಿ ನಡೆಯೋಕಾಗೋಲ್ಲ. ಈಗಾಗಲೇ ಕೋರ್ಟ್ ರಾತ್ರಿ ಸಂಚಾರ ಬೇಡ ಎಂದು ಆದೇಶ ಹೊರಡಿಸಿದೆ. ಹಾಗಾಗಿ ಕೋರ್ಟ್ ಆದೇಶ ರಾಹುಲ್ ಗಾಂಧಿಯವರಿಗೆ ಗೊತ್ತಿದೆ ಅಂದುಕೊಳ್ಳುತ್ತೇನೆ. ಬಂಡಿಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.