ಹುಬ್ಬಳ್ಳಿ: ಕರ್ನಾಟಕವನ್ನು ನಾವು ಕಡೆಗಣಿಸುತ್ತಿಲ್ಲ, ಸರ್ಕಾರ ಶೀಘ್ರದಲ್ಲೇ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಪರಿಹಾರ ಬಿಡುಗಡೆಗೆ ಅದರದ್ದೆ ಆದ ಮಾನದಂಡಗಳು ಇರುತ್ತದೆ. ನಾವು ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡುತ್ತಿಲ್ಲ. ಎಲ್ಲ ರಾಜ್ಯಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತಿದ್ದೇವೆ. ಕರ್ನಾಟಕಕ್ಕೆ ಸಿಗಬೇಕಾದ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.
Advertisement
Advertisement
ತ್ರಿವಳಿ ತಲಾಖ್, 370ನೇ ವಿಧಿ ರದ್ದು ಮಾಡಿದರೆ ದೇಶದಲ್ಲಿ ಏನೇನೋ ಆಗುತ್ತದೆ ಎಂದು ಯಾರೋ ಹೇಳುತ್ತಿದ್ದರು. ದೇಶದಲ್ಲಿ ಏನೂ ಆಗಿಲ್ಲ, ಕಾಶ್ಮೀರದ ಜನತೆ ಅದನ್ನು ಶಾಂತಿಯುತವಾಗಿಯೇ ಸ್ವಿಕರಿಸಿದ್ದಾರೆ. ಸದ್ಯ ಕಾಶ್ಮೀರಲ್ಲಿಯೂ ಶಾಂತಿ ನೆಲೆಸಿದೆ. ಆದರೆ ರಾಹುಲ್ ಗಾಂಧಿ ಮಾತ್ರ ಅದನ್ನು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ಅರ್ಥ ವ್ಯವಸ್ಥೆಯೂ ಚೆನ್ನಾಗಿದೆ. ನಾನು ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲ ಉದ್ಯಮಿಗಳು, ಉದ್ಯಮ ವಲಯಗಳ ಜೊತೆ ಸಭೆ ನಡೆಸಿದ್ದೇವೆ ಎಂದು ವಿವರಿಸಿದರು.
Advertisement
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬ್ಯಾಂಕ್ಗಳಿಂದ ಸಾಲ ಮೇಳ ನಡೆಸುತ್ತಿದ್ದೇವೆ. ಅ.3 ರಿಂದ ಲೋನ್ ಮೇಳ ನಡೆಯುತ್ತದೆ. ಬ್ಯಾಂಕ್ ಸವಲತ್ತುಗಳು ನೇರವಾಗಿ ಜನರಿಗೆ ಸಿಗಲೆಂಬುದು ನಮ್ಮ ಉದ್ದೇಶ. ಸಣ್ಣ ಹಾಗೂ ಮಧ್ಯಮ ಕೈಗಾರಿಕಾ (ಎಂಎಸ್ಎಂಇ) ವಲಯದ ಜಿಎಸ್ಟಿ ಬಾಕಿ ಹಣವನ್ನು ನೀಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ನಾನು ಹಾಗೂ ಹಣಕಾಸು ಸಚಿವರು ದೇಶಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಸಭೆ ನಡೆಸುತ್ತಿದ್ದೇವೆ ಎಂದರು.
Advertisement
ಕಾರ್ಪೋರೆಟ್ ತೆರಿಗೆಯನ್ನು ಶೇ.30 ರಿಂದ ಶೇ.22 ಇಳಿಸಿದ್ದೇವೆ. ಭಾರತ ವಿಶ್ವದ ದೊಡ್ಡ ಆರ್ಥ ವ್ಯವಸ್ಥೆಯ ರಾಷ್ಟ್ರವಾಗುವುದಕ್ಕೆ ನಾವು ಮುನ್ನುಡಿ ಬರೆದಿದ್ದೇವೆ. 5 ಟ್ರಿಲಿಯನ್ ಅರ್ಥ ವ್ಯವಸ್ಥೆ ನಮ್ಮ ಗುರಿಯಾಗಿದೆ. ದೇಶದ ಜಿಡಿಪಿ ಕುಸಿತದ ಬಗ್ಗೆ ಉತ್ತರ ನೀಡಲು ನಿರಾಕರಿಸಿದ ಠಾಕೂರ್, ಸಾಮಾಜಿಕ ಜಾಲತಾಣಗಳಲ್ಲಿ ಬರೋದು ಬೇರೆ. ಲೋನ್ ಮೇಳ ಆದ ಮೇಲೆ ದೇಶದಲ್ಲಿ ಆರ್ಥಿಕತೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಮಾಹಿತಿ ನೀಡಿದರು.