ಬೆಂಗಳೂರು: ಪಕ್ಷೇತರ ಶಾಸಕ ಆರ್.ಶಂಕರ್ ನನಗೆ ಬೇಡ. ಬೇಕಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಕ್ಕ ತಂದು ಕೂರಿಸಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ ಪ್ರಸಂಗ ಇಂದು ನಡೆಯಿತು.
ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಶಾಸಕರು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಬಹುದು. ಕೆಲವರು ಹಣ ಪಡೆದುಕೊಂಡು ಸುಮ್ಮನಾಗಬಹುದು. ಈ ಎಲ್ಲ 15 ಜನರ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಇನ್ನು ಆರ್.ಶಂಕರ್ ತನ್ನ ಪಕ್ಷವನ್ನು ಕಾಂಗ್ರೆಸ್‍ನಲ್ಲಿ ವಿಲೀನಗೊಳಿಸಿದ್ದಾರೆ. ಈ ವೇಳೆ ಆರ್.ಶಂಕರ್ ಸದನಕ್ಕೆ ಬಂದ್ರೆ ನಮಗೆ ಬೇಡ ಎಂದು ಕಿಡಿಕಾರಿದರು.
ಈ ಹಿಂದೆ ದೇವದುರ್ಗದಲ್ಲಿ ಆಪರೇಷನ್ ಕಮಲದ ಆಡಿಯೋ ಬಿಡುಗಡೆಗೊಂಡಾಗ ಆ ಧ್ವನಿ ನನ್ನದೇ ಎಂದು ಯಡಿಯೂರಪ್ಪನವರು ಒಪ್ಪಿಕೊಂಡರು. ಆದ್ರೆ ಮುಖ್ಯವಾದ ಮಾತುಗಳು ನನ್ನದಲ್ಲ ಎಂದು ಯಡಿಯೂರಪ್ಪ ಅಂದ್ರು. ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲೇ ನನ್ನದೇ ಧ್ವನಿ ಎಂದು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ವಿಧಾನಸೌಧ ಒಂದು ಕಿ.ಮೀ. ಆಸುಪಾಸಿನಲ್ಲಿಯೇ ಇರಿಸಲಾಗಿದೆ. ನಾನು ಅವರಿಬ್ಬರು ಬರೋದನ್ನು ಕಾಯುತ್ತಿದ್ದೇನೆ. ವಿಧಾನಸೌಧದಲ್ಲಿ ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ನೋಡೋಣ ಎಂದು ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದರು.