ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್‌ನವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರು. ಪಕ್ಷದ ಹಿತದೃಷ್ಟಿಯಿಂದ ಅವರು ಸರಿಯಾದ ತೀರ್ಮಾನ ಕೈಗೊಂಡಿರುತ್ತಾರೆ. ಯಡಿಯೂರಪ್ಪ (BS Yediyurappa) ಅವರು ಎರಡು ಬಾರಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ, ಅವರಿಗೆ ಪಕ್ಷದ ಒಳಿತು ಗೊತ್ತಿದೆ. ಮೋದಿ ಅವರು ಹೆಚ್.ಡಿ ದೇವೇಗೌಡರಿಗೆ ಅತಿ ಹೆಚ್ಚಿನ ಗೌರವ ಕೊಡುತ್ತಾರೆ. ಒಳ್ಳೆ ವಿಚಾರ, ಒಳ್ಳೆ ಕೆಲಸದ ಬಗ್ಗೆ ದೇವೇಗೌಡರು ಮೋದಿ ಅವರ ಬಗ್ಗೆ ಮೊದಲಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೈತ್ರಿ ಮಾತು ನಡೆದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ:
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ ಬರುತ್ತದೆ. ಅದೇ ನಮ್ಮ ಯಡಿಯೂರಪ್ಪ ಅವರು ಕಾಲಿಟ್ಟರೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತೆ, ಎಲ್ಲೆಲ್ಲೂ ಹಸಿರು ತುಂಬಿರುತ್ತೆ. ಕಾಂಗ್ರೆಸ್‌ನವರದ್ದು ಸುಳ್ಳು ಭರವಸೆಗಳು ಅಂತ ಜನರಿಗೆ ಗೊತ್ತಾಗಿದೆ. ಇದೆಲ್ಲದರ ನಡುವೆಯೂ ಜನ ಕಾಂಗ್ರೆಸ್‌ಗೆ 135 ಸ್ಥಾನ ಕೊಟ್ಟಿದ್ದಾರೆ ಮೊದಲು ಅವರ ಋಣ ತೀರಿಸಿ. ಲೋಕಸಭಾ ಚುನಾವಣೆಯ ಬಗ್ಗೆ ಯೋಜನೆ ಮಾಡಬೇಡಿ. ಸಿದ್ದರಾಮಯ್ಯ (Siddaramaiah) ಅವರು ಈ ಹಿಂದೆ ಸಿಎಂ ಆಗಿದ್ದಾಗಲೂ ಮೈಸೂರು-ಕೊಡಗಿನ ಜನ ನನ್ನನ್ನ ಗೆಲ್ಲಿಸಿದ್ದಾರೆ. ಈ ಚುನಾವಣೆಯಲ್ಲೂ ಗೆಲ್ಲಿಸುತ್ತಾರೆ. ಸ್ವಲ್ಪ ಕಾದು ನೋಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಯಾವುದರಲ್ಲಿ ನುಡಿದಂತೆ ನಡೆದಿದ್ದೀರಿ?
ಕಾಂಗ್ರೆಸ್‌ನವರು ನುಡಿದಂತೆ ನಡೆದಿದ್ದೀವಿ ಅಂತಾರೆ? ನಾನು ಸಿದ್ದರಾಮಯ್ಯ ಅವರಿಗೆ ಕೇಳಲು ಬಯಸುತ್ತೇನೆ ಯಾವುದರಲ್ಲಿ ನುಡಿದಂತೆ ನಡೆದಿದ್ದೀರಿ? 200 ಯೂನಿಟ್ ಕರೆಂಟ್ ಕೊಡ್ತೀವಿ ಅಂತಾ ಹೇಳಿದ್ರಿ, ಕೊಟ್ಟಿದ್ದೀರಾ? ವರ್ಷದ ಸರಾಸರಿ ತೆಗೆದುಕೊಳ್ಳುತ್ತೇವೆ ಅಂತ ಮೋಸ ಮಾಡಿದ್ರಿ. ಯುವನಿಧಿಯನ್ನೂ ಕೊಟ್ಟಿಲ್ಲ, ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ಕೊಡ್ತೀವಿ ಅಂದ್ರಲ್ಲ, ಕೊಟ್ಟಿದ್ದೀರಾ? ಊರು ತುಂಬಾ ಪೋಸ್ಟರ್ ಹಾಕಿಸಿಕೊಂಡು ಓಡಾಡುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ
ಕರ್ನಾಟಕದ ಜನ ಪ್ರಜ್ಞಾವಂತರಿದ್ದಾರೆ, ಎಲ್ಲವನ್ನೂ ನೋಡ್ತಿದ್ದಾರೆ. ಯಾವ ಚುನಾವಣೆಯಲ್ಲಿ ಯಾವ ರೀತಿ ವೋಟ್ ಮಾಡ್ಬೇಕು ಅಂತಾ ಗೊತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದ ಮತದಾರರು ಮೋದಿ ಅವರ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Web Stories