ಬೆಂಗಳೂರು: ಬೀದಿ ನಾಯಿ ‘ಲಾರಾ’ ಅಂತ್ಯ ಸಂಸ್ಕಾರ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನದಲ್ಲಿ ನಡೆಯಿತು. ನಾಯಿ ಅಂತ್ಯಕ್ರಿಯೆಗೆ ನಟಿ ರಮ್ಯಾ ಆಗಮಿಸಿದ್ದು ವಿಶೇಷವಾಗಿತ್ತು.
ನಾಯಿ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿ ವಿರುದ್ಧ ರಮ್ಯಾ ಸರಣಿ ಟ್ವೀಟ್ ಮಾಡಿದ್ದರು. ಇಂದು ಲಾರಾ ಅಂತಿಮ ಸಂಸ್ಕಾರದಲ್ಲಿ ಎಲ್ಲರೂ ಭಾಗವಹಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಈ ಹಿನ್ನೆಲೆ ಇಂದು ಬೆಂಗಳೂರಿನ ಸುಮ್ಮನಹಳ್ಳಿ ಪ್ರಾಣಿಗಳ ಸ್ಮಶಾನಕ್ಕೆ ರಮ್ಯಾ ಬಂದು ಲಾರಾಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಲಾರಾಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಲಾರಾ ಅಂತ್ಯಕ್ರಿಯೆ ಸಂಸ್ಕಾರಕ್ಕೆ ಹಲವು ಪ್ರಾಣಿ ಪ್ರಿಯರು ಭಾಗಿಯಾಗಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ
ಶ್ವಾನಪ್ರೀಮಿಯಾದ ರಮ್ಯಾ ಮಾತನಾಡಿ, ಆಕ್ಸಿಡೆಂಟ್ ಆಗುತ್ತೆ. ಮನುಷ್ಯ ತಪ್ಪು ಮಾಡ್ತಾನೆ ಅದು ಸಹಜ. ಆದರೆ ಈ ವಿಚಾರವನ್ನು ನಾವು ಗಮನಿಸಿದಾಗ, ಆ ವ್ಯಕ್ತಿ ಬೇಕಂತಲೇ ನಾಯಿ ಮೇಲೆ ಗಾಡಿ ಹತ್ತಿಸಿದ್ದಾನೆ. ಇದನ್ನ ನೋಡಿ ಸಹಿಸಿಕೊಳ್ಳಲು ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶದಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ. 50 ರೂಪಾಯಿ ಕೊಟ್ಟು ಹೊರಗಡೆ ಬರ್ತಾರೆ. ದಯೆ ಅನ್ನೋದು ಕೇವಲ ಮನುಷ್ಯನಿಗೆ ಅಲ್ಲ. ಪ್ರಕೃತಿಯಲ್ಲಿರುವ ಪ್ರಾಣಿಗಳಿಗೂ ಕೂಡ ಇರಬೇಕು. ಮೊದಲನೆಯದಾಗಿ ಕಾನೂನು ಕಠಿಣವಾಗಬೇಕಿದೆ. ದೊಡ್ಡವರು, ದುಡ್ಡಿರೋರು ಕಾನೂನಿನಲ್ಲಿ ಎಸ್ಕೇಪ್ ಆಗ್ತಾರೆ. ಕಾನೂನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡ್ತಿನಿ ಎಂದರು.
ಲಾರಾ ಪಾರ್ಥಿವ ಶರೀರದ ಬಳಿ ನಾಯಿಯನ್ನ ಸಲಹುತ್ತಿದ್ದ ಗಾಯತ್ರಿ ಕಣ್ಣೀರು ಇಡುತ್ತಿದ್ದರು. ಲಾರಾ ನಾಯಿಯನ್ನ ಸಣ್ಣ ಮರಿಯಿಂದ ಗಾಯತ್ರಿ ಅವರು ಸಲಹುತ್ತಿದ್ದೆ ಎಂದು ಭಾವುಕರಾಗಿದ್ದಾರೆ. ಸೆಂಟ್ ಪೀಟರ್ಸ್ ಶಾಲಾ ಮಕ್ಕಳು ಲಾರಾಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು
ಪ್ರಕರಣ ಬೆಳಕಿಗೆ ಬಂದಾಗಿನಿಂದ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ, ಆತನಿಗೆ ಡ್ರೈವಿಂಗ್ ಲೈಸನ್ಸ್ ಇದ್ಯಾ? ಅಲ್ಕೋಹಾಲ್ ಅಥವಾ ಡ್ರಗ್ಸ್ ಸೇವನೆ ಮಾಡಿದ್ದನಾ? ಪೊಲೀಸರು ಏನು ಕ್ರಮ ತೆಗೆದುಕೊಂಡಿದ್ದಾರೆ. ಆತ ಇನ್ನೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನಾ? ಅಥವಾ ಆತನನ್ನ ಬಿಟ್ಟು ಕಳಿಸಿದ್ರಾ? ಎಂದು ಸರಣಿ ಟ್ವಿಟ್ ಮಾಡಿದ್ದು, ಮುಖ್ಯಮಂತ್ರಿಗಳು, ಸಂಸದ ತೇಜಸ್ವಿ ಸೂರ್ಯ, ಮೇನಕಾಗಾಂಧಿ, ಶಾಸಕಿ ಸೌಮ್ಯ ರೆಡ್ಡಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಆರ್.ಆಶೋಕ್ ಗೆ ಟ್ವೀಟ್ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದ ಆದಿಕೇಶವುಲು ಮೊಮ್ಮಗ ಅರೆಸ್ಟ್
ಆದಿಕೇಶವಲು ನಾಯ್ಡು ಮೊಮ್ಮಗ ಆದಿನಾರಾಯಣ ಉದ್ದೇಶಪೂರ್ವಕವಾಗಿ ಕಾರನ್ನು ಹರಿಸಿದ್ದ. ಘಟನೆ ಬಳಿಕ ಶ್ವಾನ ನಾಪತ್ತೆಯಾಗಿತ್ತು. ನಿನ್ನೆ ನಾಯಿಯ ಮೃತ ದೇಹ ಪತ್ತೆಯಾಗಿದೆ. ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಗೆ ಪೋಸ್ಟ್ ಮಾರ್ಟಂ ಮಾಡಲಾಗಿತ್ತು. ಘಟನೆಯ ಬಳಿಕ ನಾಪತ್ತೆಯಾಗಿದ್ದ ಆದಿನಾರಾಯಣನನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.