ಬೆಂಗಳೂರು: ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಮಾಡಲಾಗಿದ್ದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣವನ್ನು ಸಿಐಡಿಗೆ ವಹಿಸಲಾಗುತ್ತದೆ. ಸಿಐಡಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ತನಿಖೆಗೆ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲು ನಾನು ಮತ್ತು ಗೃಹ ಸಚಿವರು ಚರ್ಚೆ ನಡೆಸಿ ನಿರ್ಧರಿಸಿದ್ದೇವೆ. ಇಂದು ಅಥವಾ ನಾಳೆ ಈ ಬಗ್ಗೆ ಆದೇಶ ಹೊರಡಿಸುತ್ತೇವೆ. ಈ ಬಗ್ಗೆ ಸಮಗ್ರ ತನಿಖೆ ಮಾಡಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರೋ ಉದ್ದೇಶ ಪೂರ್ವಕವಾಗಿ ಈ ಗಲಾಟೆ ಆರಂಭಿಸಿ, ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಇನ್ನಾದರೂ ರಾಜ್ಯದಲ್ಲಿ ಶಾಂತ ವಾತಾವರಣ ಇರಲಿದೆ ಅಂದುಕೊಂಡಿದ್ದೇನೆ ಎಂದರು.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ಇದರಿಂದ ಮುಸಲ್ಮಾನರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂದು ಹೇಳಲು ತಯಾರಿಲ್ಲ. ದೇಶದ ಮುಸಲ್ಮಾನರಿಗೆ ಈ ಕಾಯ್ದೆಯಿಂದ ತೊಂದರೆ ಆಗುವುದಿಲ್ಲ ಎಂದು ಸ್ವತಃ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರು ಕೂಡ ಉದ್ದೇಶ ಪೂರ್ವಕವಾಗಿ ಗೊಂದಲ ಉಂಟುಮಾಡುವ ಷಡ್ಯಂತ್ರ, ಪಿತೂರಿಯನ್ನು ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಇದನ್ನ ಜನ ಅರ್ಥ ಮಾಡಿಕೊಂಡಿದ್ದಾರೆ, ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.