ಬಾಗಲಕೋಟೆ: ಭಾರತವನ್ನು ಬಿಟ್ಟು ಜಗತ್ತನ್ನು ವರ್ಣಿಸಲು ಸಾಧ್ಯವಿಲ್ಲವೆಂದು ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ಕಾಲೇಜಿಗೆ ಉಗಾಂಡ ದೇಶದ ಎರಡನೇ ಉಪ ಪ್ರಧಾನಿ ಡಾ. ಅಲಿ ಕಿರುಂದಾ ಕಿವಿಜೆಂಜಾರವರು ತಮ್ಮ ದೇಶದ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರು ಜಗತ್ತಿನಲ್ಲಿನ ಭಯೋತ್ಪಾದನೆ ನಿರ್ಮೂಲನೆ ಕುರಿತು ಅವರನ್ನು ಪ್ರಶ್ನಿಸಿದಾಗ, ಭಾರತ ಜಗತ್ತಿನಲ್ಲೇ ದೊಡ್ಡ ದೇಶವಾಗಿದೆ. ಅಲ್ಲದೇ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಆರ್ಥಿಕವಾಗಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಭಾರತವನ್ನು ಬಿಟ್ಟು ಇಡೀ ಜಗತ್ತನ್ನು ವರ್ಣಿಸಲು ಅಸಾಧ್ಯ. ಅಲ್ಲದೇ ಭಯೋತ್ಪಾದನೆ ನಿರ್ಮೂಲನೆಗೆ ಕುರಿತು ಭಾರತ ಮಹತ್ವದ ಸ್ಥಾನದಲ್ಲಿದೆ ಎಂದರು.
Advertisement
Advertisement
ಪ್ರಧಾನಿ ಮೋದಿಯವರು ಇತ್ತೀಚೆಗೆ ಉಗಾಂಡಾ ದೇಶಕ್ಕೆ ಭೇಟಿ ನೀಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಎರಡೂ ದೇಶಗಳ ನಡುವೆ ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ನಿರ್ಮಿಸುವ ದೃಷ್ಟಿಯಿಂದ ಎರಡೂ ದೇಶದ ಪ್ರತಿನಿಧಿಗಳೊಂದಿಗೆ ಸಾಕಷ್ಟು ವಿಷಯಗಳು ಚರ್ಚೆಯಾಗಿದ್ದು, ಭಾರತದೊಂದಿಗಿನ ಉತ್ತಮ ಬಾಂಧವ್ಯಕ್ಕೆ ಪ್ರಧಾನಿ ಭೇಟಿ ಒಂದು ಉತ್ತಮ ವೇದಿಕೆಯಾಗಿತ್ತು ಎಂದು ತಿಳಿಸಿದರು.
Advertisement
ಬಸವೇಶ್ವರ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ವಿಭಾಗದ ಮುಖ್ಯಸ್ಥರೊಂದಿಗೆ ಇಲ್ಲಿನ ಶಿಕ್ಷಣದ ಕೌಶಲ್ಯಗಳು, ಶಿಕ್ಷಣದ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಲಿ ಕಿರುಂದಾ ಕಿವಿಜೆಂಜಾ ಚರ್ಚೆ ನಡೆಸಿದರು.