ಮುಂಬೈ: ಠಾಕ್ರೆ ಕುಟುಂಬ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆಗೆ ಶಿವಸೇನೆ ಸಂಸದ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ. ಬೆದರಿಕೆ ಒಡ್ಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಕೇಂದ್ರ ಸಚಿವರಾಗಿರಬಹುದು ಆದರೆ ಇದು ಮಹಾರಾಷ್ಟ್ರ. ಈ ವಿಚಾರವನ್ನು ಮರೆಯಬೇಡಿ. ನಾವು ನಿಮ್ಮ ತಂದೆ. ಇದರ ಅರ್ಥವೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ ಎಂದು ರಾವತ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉಪನಗರ ಬಾಂದ್ರಾದಲ್ಲಿರುವ ಖಾಸಗಿ ನಿವಾಸ ಮಾತೋಶ್ರೀಯಲ್ಲಿ ನಾಲ್ವರಿಗೆ ಜಾರಿ ನಿರ್ದೇಶನಾಲಯದ ಸೂಚನೆಯೊಂದು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ರಾಣೆ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಯಾಗಿ ಟಾಂಗ್ ನೀಡಿರುವ ರಾವತ್, ನಿಮ್ಮ ಜಾತಕ ನಮ್ಮ ಬಳಿ ಇದೆ ಎಂದು ನಾರಾಯಣ ರಾಣೆ ಹೆದರಿಸುತ್ತಿದ್ದಾರೆ. ಆದರೆ ನಾವು ಕೂಡ ನಿಮ್ಮ ಜಾತಕ ಹೊಂದಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕನಾಗಿ ಅಂಬೇಡ್ಕರ್, ಭಗತ್ ಸಿಂಗ್ ಕನಸು ನನಸು ಮಾಡಿದ್ದೇನೆ: ಕೇಜ್ರಿವಾಲ್
ಬಿಜೆಪಿ ಸಂಸದ ಕಿರಿತ್ ಸೋಮಯ್ಯ ಕೂಡ ಶಿವಸೇನಾ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸೋಮಯ್ಯಗೂ ಟಾಂಗ್ ನೀಡಿರುವ ರಾವತ್, ಕೇಂದ್ರದ ತನಿಖಾ ಸಂಸ್ಥೆಗಳಿಗೆ ನೀನು ಹಗರಣದ ದಾಖಲೆಗಳನ್ನು ಕೊಟ್ಟರೆ, ನಾನು ನಿಮ್ಮ ಹಗರಣಗಳ ದಾಖಲೆ ಕೊಡುತ್ತೇನೆ. ನಿಮ್ಮ ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ತಿಳಿಸಿದ್ದಾರೆ.
ಸೋಮಯ್ಯ ಅವರು ಶಿವಸೇನೆ ಮುಖ್ಯಸ್ಥರ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ. ಆದರೆ ಬಿಜೆಪಿ ಸಂಸದರು 300 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಬಳಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ರಾವತ್ ಹೇಳಿದ್ದಾರೆ. ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್
ಪೊವಾಯ್‌ನ ಪೆರು ಬಾಗ್‌ನಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯ ಮೂಲಕ ಸೋಮಯ್ಯ 300 ಕೋಟಿಗೂ ಹೆಚ್ಚು ಸುಲಿಗೆ ಮಾಡಿದ್ದಾರೆ. ಪಾಲ್ಫರ್‌ನಲ್ಲಿ 260 ಕೋಟಿ ಮೊತ್ತದ ಯೋಜನೆ ಕೆಲಸ ನಡೆಯುತ್ತಿದೆ. ಅದು ಅವರ ಮಗನ ಹೆಸರಿನಲ್ಲಿದೆ. ಅವರ ಪತ್ನಿ ನಿರ್ದೇಶಕರಾಗಿದ್ದಾರೆ. ಹಣವನ್ನು ಹೇಗೆ ಕಬಳಿಸಿದರು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.