ಬೆಂಗಳೂರು: ಸಿಎಂ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಇದರಲ್ಲಿ ನಾವು ಗೆಲುವು ಪಡೆಯುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಾಪ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಗುರುವಾರ ವಿಶ್ವಾಸಮತ ಯಾಚನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಪಡೆಯುತ್ತೇವೆ. ನಮ್ಮ ಯಾವ ಶಾಸಕರೂ ಸದನಕ್ಕೆ ಗೈರಾಗಲ್ಲ. ಅಲ್ಲದೆ ಯಾರೂ ವಿಪ್ ಉಲ್ಲಂಘನೆ ಕೂಡ ಮಾಡಲ್ಲ. ಎಲ್ಲರೂ ಸದನಕ್ಕೆ ಬರುತ್ತಾರೆ ಎಂದು ಹೇಳಿದರು.
ಸ್ಪೀಕರ್ ನೇತೃತ್ವದಲ್ಲಿ ಕಲಾಪ ಸಲಹಾ ಸಮಿತಿಯಲ್ಲಿ ನಡೆದ ಸಭೆಯ ವೇಳೆ ಬಿಎಸ್‍ವೈ, ಸುಪ್ರೀಂ ತೀರ್ಪು ಯಾವಾಗ ಬೇಕಾದರೂ ಬರಲಿ. ಆದರೆ ಸಿಎಂ ಇಂದೇ ವಿಶ್ವಾಸ ಮತ ಯಾಚನೆ ಮಾಡಬೇಕು. ಯಾಕೆಂದರೆ ಸರ್ಕಾರಕ್ಕೆ ಬಹುಮತ ಇಲ್ಲ. ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರ ಮತ್ತು ಆಡಳಿತ ಪಕ್ಷದ ನಾಯಕರ ಜೊತೆ ಸ್ಪೀಕರ್ ಸುಮಾರು ಮುಕ್ಕಾಲು ಗಂಟೆ ಸಭೆ ನಡೆಸಿದರು. ನಂತರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಸಾಬೀತು ಪಡಿಸಲು ಸಿಎಂಗೆ ಸ್ಪೀಕರ್ ಅನುಮತಿ ನೀಡಿದರು. ಅದರಂತೆಯೇ ಸಿಎಂ ಅವರು ಗುರುವಾರ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.