ಕುಮಾರಸ್ವಾಮಿ ಬದಲು ಸಿದ್ದರಾಮಯ್ಯನವ್ರಿಗೆ ಸಿಎಂ ಪಟ್ಟ ಕಟ್ಟೋದಾದ್ರೆ ಓಕೆ: ಸಚಿವ ಶಿವಶಂಕರ ರೆಡ್ಡಿ ಬಾಂಬ್

Public TV
1 Min Read
SHIVASHANKAR REDDY

ಚಾಮರಾಜನಗರ: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಬದಲಿಸಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರಿಗೆ ಸಿದ್ದರಾಮಯ್ಯನವರ ಸಿಎಂ ಆಗುತ್ತೇನೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾವ ರೀತಿ ಹೇಳಿದ್ದಾರೋ ನಮಗೆ ಗೊತ್ತಿಲ್ಲ, ನಾವು ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವ ಆಸೆ ಹೊಂದಿದ್ದೆವು. ಹೀಗಾಗಿ ಸಿದ್ದರಾಮಯ್ಯನವರನ್ನು ಸಿಎಂ ಮಾಡಲೇಬೇಕೆಂದು ವಿಧಾನಸಭಾ ಚುನಾವಣೆಯಲ್ಲಿ ಪಣ ತೊಟ್ಟಿದ್ದೇವು. ಆದರೆ ನಮಗೆ ಬೇಕಾದ ಬಹುಮತ ಸಿಗಲಿಲ್ಲ. ಹೀಗಾಗಿ ಅವರು ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿತು. ಇಂದು ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಒಂದು ವೇಳೆ ಸಭೆಯಲ್ಲಿ ಎಲ್ಲರೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರ ಮಾಡಿದರೆ, ನಮ್ಮೆಲ್ಲರ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಸಿಎಂ ಪರವಾಗಿ ಬ್ಯಾಟ್ ಬೀಸಿದರು.

MYS SIDDU

ಸಮನ್ವಯ ಸಮಿತಿಯಲ್ಲಿ ತೀರ್ಮಾನವಾದರೆ, ಮುಖ್ಯಮಂತ್ರಿಗಳ ಬದಲಾವಣೆ ಖಚಿತ. ಎರಡು ಪಕ್ಷಗಳ ಸಮನ್ವಯ ಸಮಿತಿಯವರು ಈ ಬಗ್ಗೆ ಕುಳಿತು ತೀರ್ಮಾನ ಕೈಗೊಳ್ಳಬೇಕು. ಸಮ್ಮಿಶ್ರ ಸರ್ಕಾರದ ಉಸ್ತುವಾರಿಯನ್ನು ಸಮನ್ವಯ ಸಮಿತಿ ಹೊಂದಿದೆ. ಸಮಿತಿಯ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಒಂದು ವೇಳೆ ಸಭೆಯಲ್ಲಿ ಕುಮಾರಸ್ವಾಮಿಯವರನ್ನು ಬದಲಾಯಿಸಿ, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದರೆ ನಮ್ಮ ಎಲ್ಲಾ ಶಾಸಕರುಗಳು ಬದ್ಧರಾಗಿರುತ್ತೇವೆ ಎಂದು ಹೇಳಿಕೆ ನೀಡಿದರು.

ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಬೀಳುತ್ತದೆಂಬ ಹಗಲುಗನಸು ಕಾಣುತ್ತಾ ಕುಳಿತುಕೊಂಡಿದ್ದಾರೆ. ಅವರುಗಳು ಒಡೆದು ಆಳುವ ನೀತಿಗೆ ಹೆಚ್ಚಿನ ಆಧ್ಯತೆ ನೀಡುವವರು. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಾತ್ಯತೀತ ಪಕ್ಷಗಳಾಗಿದ್ದು, ಸಮಾನ ಮನಸ್ಕರೊಂದಿಗೆ ಸರ್ಕಾರ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗುವುದಿಲ್ಲ ಎಂದು ತಿಳಿಸಿದರು.

SIDDU HDK

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *