ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ- ಉತ್ತರ ಕರ್ನಾಟಕ ಸಂಘಟನೆಗಳಿಂದ ವಿರೋಧ

Public TV
1 Min Read
HBL NOT SUPPORT

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಅಪಸ್ವರ ಕಂಡುಬಂದಿದ್ದು, ಜಿಲ್ಲೆಯ ಹಲವು ಸಂಘಟನೆಗಳು ಪ್ರತ್ಯೇಕ ರಾಜ್ಯ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಹೇಳಿವೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಳಸಾ ಸಮನ್ವಯ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಆಗಸ್ಟ್ 2 ರಂದು ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಬಂದ್ ಗೆ ನಮ್ಮ ಬೆಂಬಲವಿಲ್ಲ. ಪ್ರತ್ಯೇಕ ರಾಜ್ಯದ ಕೂಗಿಗೆ ಬಿಜೆಪಿಯವರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು.

ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಜನಪ್ರತಿನಿಧಿಗಳು ಇದುವರೆಗೂ ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಮೊದಲು ಇಲ್ಲಿನ ಜನಪ್ರತಿನಿಧಿಗಳು ಉತ್ತರ ಕರ್ನಾಟಕ ಅಭಿವೃದ್ದಿಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ಮನವರಿಕೆ ಮಾಡಿಕೊಳ್ಳಲಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತ್ಯೇಕತೆಯ ಕೂಗಿಗೆ ಅವಕಾಶ ಕೊಡದೆ, ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿ. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಸರ್ಕಾರಗಳು ಎಚ್ಚೆತ್ತುಕೊಂಡು ವಿವಿಧ ತಜ್ಞರು ಹಾಗೂ ಚಿಂತಕರ ಜೊತೆ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿ ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸಬೇಕೆಂದು ಒತ್ತಾಯಿಸಬೇಕು. ಒಂದು ವೇಳೆ ಹೀಗೆ ನಿರ್ಲಕ್ಷ್ಯ ಮುಂದುವರಿಸಿದರೆ, ಉಗ್ರ ಹೋರಾಟ ಕೈಗೊಳ್ಳುವುದು ನಿಶ್ಚಿತ ಎಂದು ಸಂಘಟನೆಯ ಮುಖಂಡರುಗಳು ತಿಳಿಸಿದರು.

ಬಂದ್‍ಗೆ ಕಳಸಾ ಸಮನ್ವಯ ಸಮಿತಿ ಸೇರಿದಂತೆ ಕನ್ನಡಪರ ಸಂಘಟನೆ, ರೈತಪರ ಸಂಘಟನೆ, ಆಟೋ ಚಾಲಕರ ಸಂಘಟನೆ ಹಾಗೂ ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *