-ಮೈಕ್ ಎಸೆದು ಅಸಮಾಧಾನ ಹೊರಹಾಕಿದ ಚಲುವರಾಯಸ್ವಾಮಿ
ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವರಾಮೇಗೌಡರಿಗೆ ಸಹಕಾರ ನೀಡಲು ಆಗಲ್ಲ ಎಂದು ಗಲಾಟೆ ಮಾಡುತ್ತಿದ್ದ ಬೆಂಬಲಿಗರ ವಿರುದ್ಧ ಅಸಮಾಧಾನಗೊಂಡು ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶದಿಂದ ಮೈಕ್ ಎಸೆದ ಘಟನೆ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸದ ಚಲುವರಾಯಸ್ವಾಮಿ ಇಂದು ನಾಗಮಂಗಲದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಗೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಕೂಡ ಆಗಮಿಸಿದ್ದರು. ಸಭೆಯಲ್ಲಿ ವರಿಷ್ಠರ ಮಾತಿನಂತೆ ಜೆಡಿಎಸ್ ಪಕ್ಷಕ್ಕೆ ಸಹಕಾರ ನೀಡಿ ಎನ್ನುತ್ತಿದ್ದಂತೆ ಜೋರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಸಿಟ್ಟು ಹೊರಹಾಕಿದರು. ಈ ವೇಳೆ ಸುಮ್ಮನಿರಿ ಎಂದು ಎಷ್ಟೇ ಹೇಳಿದರು ಬೆಂಬಲಿಗರು ತಮ್ಮ ಮಾತು ಕೇಳದಿದ್ದಾಗ ಚಲುವರಾಯಸ್ವಾಮಿ ಸಿಟ್ಟಿನಿಂದ ಮೈಕ್ ಕೆಳಕ್ಕೆ ಎಸೆದು ಅಸಮಾಧಾನ ಹೊರಹಾಕಿದರು.
ಕಾರ್ಯಕರ್ತರನ್ನು ಸಮಾಧಾನ ಮಾಡಿದ ಚಲುವರಾಯಸ್ವಾಮಿ ಜೆಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ಬಗ್ಗೆ ನನಗೂ ಅರಿವಿದೆ. ನಮ್ಮ ವಿಷಯದಲ್ಲಿ ಜೆಡಿಎಸ್ ನಡೆದುಕೊಳ್ಳುತ್ತಿರುವುದು ರಾಜ್ಯದ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಹೀಗಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಹಳೆಯ ಮೈಸೂರಿನವರಿಗೆ ಸಮನ್ವಯ ಸಮಿತಿ ಕರೆದು ಮಾತನಾಡುತ್ತೇನೆ. ಅದು ಆದ ನಂತರವೂ ಮುಂದುವರಿದರೆ ಕಡೆಗಣಿಸಲು ಸಾಧ್ಯವಿಲ್ಲ. ಹಾಗಾಗಿ ನಾಗಮಂಗಲದಿಂದ ಆರಂಭಿಸಿ ಏಳು ತಾಲೂಕುಗಳಲ್ಲಿ ಸಭೆ ನಡೆಸಲಾಗುವುದು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಚುನಾವಣೆಯ ಬಳಿಕ ಜೆಡಿಎಸ್ ನಲ್ಲಿ ಬದಲಾವಣೆ ಆಗದಿದ್ರೆ ಮುಂದಿನ ಚುನಾವಣೆ ಬಹಳ ದೂರವಿಲ್ಲ. ಆಗ ನಿರ್ಧಾರ ತೆಗೆದುಕೊಳ್ಳೋಣ. ಒಮ್ಮೆ ಸಪೋರ್ಟ್ ಮಾಡಿ ಪರಿಸ್ಥಿತಿ ನೋಡೋಣ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ರು. ಇದೇ ವೇಳೆ ಸಚಿವ ಪುಟ್ಟರಾಜು ತಮ್ಮ ವಿರುದ್ಧ ನೀಡಿದ್ದ ಡೆಡ್ ಹಾರ್ಸ್ ಹೇಳಿಕೆ ನೆನಪಿಸಿಕೊಂಡ ಚಲುವರಾಯಸ್ವಾಮಿ, ಅವರು ಹೇಳಿದ್ದು ಸತ್ಯ. ನಮ್ಮ ಜನ ನಮ್ಮನ್ನು ರಕ್ಷಣೆ ಮಾಡಿಕೊಳ್ಳದಿದ್ದಾಗ ಬೇರೆಯವರನ್ನು ಯಾಕೆ ದೂರಬೇಕು. ಕನಕಪುರದಲ್ಲಿ ಡಿಕೆ.ಶಿವಕುಮಾರ್ ಬೇಕು ಅನ್ನುವ ರೀತಿ ನೀವು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಬೇಕು ಎನ್ನಬೇಕಿತ್ತು. ಹಾಗೇ ನಡೆದುಕೊಂಡಿದ್ರೆ ಪುಟ್ಟರಾಜು ಯಾಕೆ ಡೆಡ್ ಹಾರ್ಸ್ ಅಂತಿದ್ರು. ನಾನು ಶಿವರಾಮೇಗೌಡ ಅಥವಾ ಕುಮಾರಸ್ವಾಮಿ ಅವರಿಂದ ನಿರೀಕ್ಷೆ ಇಟ್ಟುಕೊಂಡು ಚುನಾವಣೆ ಮಾಡುತ್ತಿಲ್ಲ. ಪಕ್ಷ ಹೇಳಿದಂತೆ ಚುನಾವಣೆ ಮಾಡುತ್ತಿದ್ದೇವೆ ಅಷ್ಟೆ. ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv