– ಸಿಎಂ ಕುಮಾರಸ್ವಾಮಿಯೇ ಪ್ರಕರಣದ ಮೊದಲ ಆರೋಪಿ
ಬೆಂಗಳೂರು: ಬೆಳಗ್ಗೆಯಿಂದಲೂ ಸದನದಲ್ಲಿ ಸೇರಿದಂತೆ ಪಕ್ಷದ ಶಾಸಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೌನವಾಗಿದ್ದರು. ಅಧಿವೇಶನದ ಬಳಿಕ ಕೊನೆಗೂ ಆಡಿಯೋ ತನಿಖೆ ಕುರಿತು ಮೌನ ಮುರಿದಿದ್ದು, ನಾವು ತನಿಖೆಯಿಂದ ಓಡಿ ಹೋಗುತ್ತಿಲ್ಲ ಎಂದಿದ್ದಾರೆ.
ಬಿಜೆಪಿ ಕಚೇರಿ ಬಳಿ ಶಾಸಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ನಾವು ತನಿಖೆಯಿಂದ ಓಡಿ ಹೋಗುತ್ತಿಲ್ಲ. ಆದರೆ ಆರೋಪಿ ಸ್ಥಾನದಲ್ಲಿ ನಿಂತಿರುವ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದ್ದೇವೆ. ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರೇ ಮೊದಲ ಆರೋಪಿ ಆಗಿದ್ದು, ಅವರೇ ಸ್ಪೀಕರ್ ಮೇಲೆ ಆರೋಪ ಮಾಡಿದ್ದಾರೆ. ಆದ್ದರಿಂದ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಪ್ರಕರಣವನ್ನು ನೀಡಬೇಕು ಎಂದರು.
Advertisement
Advertisement
ನಾಳೆಯೂ ಕೂಡ ಸದನದಲ್ಲಿ ಸ್ಪೀಕರ್ ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. ನಮ್ಮ 104 ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಸದನದಲ್ಲಿ ಸ್ಪೀಕರ್ ಅವರೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಂಡಿದ್ದೇವೆ. ಸಿಎಂ ಕುಮಾರಸ್ವಾಮಿ ಅವರೇ ರಾತ್ರಿ ಒಂದು ಗಂಟೆ ಸಮಯದಲ್ಲಿ ಶರಣಗೌಡರನ್ನು ನನ್ನ ಬಳಿ ಕಳುಹಿಸಿದ್ದಾರೆ. ಆದ್ದರಿಂದ ಅವರೇ ಪ್ರಕರಣದ ಮೊದಲ ಆರೋಪಿ ಆಗುತ್ತಾರೆ. ಹೀಗಾಗಿ ಅವರ ಅಡಿಯಲ್ಲಿ ತನಿಖೆ ನಡೆಯಲು ನಾವು ಒಪ್ಪಿಗೆ ನೀಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸದನದ ಬಳಿಕ ಬಿಎಸ್ ಯಡಿಯೂರಪ್ಪ ಅವರು ತುರ್ತು ಶಾಸಕರ ಸಭೆಯನ್ನು ಬಿಜೆಪಿ ಕಚೇರಿಯಲ್ಲಿ ನಡೆಸಿದರು. ಸಭೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಈಶ್ವರಪ್ಪ, ಸಿ.ಟಿ ರವಿ, ಸುರೇಶ್ ಕುಮಾರ್, ವಿಶ್ವೇಶ್ವರ್ ಹೆಗಡೆ ಕಾಗೇರಿ, ಪ್ರೀತಂ ಗೌಡ, ತುರವೇಕೆರೆ ಶಾಸಕ ಜಯರಾಂ, ಶಿವನಗೌಡ ಅವರು ಭಾಗವಹಿಸಿದ್ದರು. ನಾಳೆ ಸದನದಲ್ಲಿ ಎಸ್‍ಐಟಿ ತನಿಖೆ ವಿರೋಧಿಸಿ ಯಾವ ರೀತಿ ಹೋರಟ ನಡೆಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಎಸ್‍ಐಟಿ ತನಿಖೆ ಒಪ್ಪಿಗೆ ನೀಡದೆ ಧರಣಿ ಮುಂದುವರಿಸಬೇಕು. ಆಡಳಿತ ಪಕ್ಷದ ವಿರುದ್ಧ ಪಕ್ಷದ ಸದಸ್ಯರು ಒಗ್ಗಟ್ಟಿನಿಂದ ಮಾತನಾಡಬೇಕು ಎಂದು ಬಿಎಸ್‍ವೈ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv