ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಲಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡಿರುವ ಪ್ರಕರಣಕ್ಕೆ ನಾವು ಹೊಣೆಯಲ್ಲ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ ಜಿ.ಕೃಷ್ಣಮೂರ್ತಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.
ಈ ಘಟನೆಗೆ ಸ್ಥಳೀಯರು, ಮನೆ ಮಾಲೀಕರೇ ಹೊಣೆಗಾರರು ಎಂದು ಬೆಸ್ಕಾಂ ಮೇಲೆ ಮಾಡಿದ್ದ ಆರೋಪವನ್ನು ತಳ್ಳಿಹಾಕಿದ್ದಾರೆ. ಕೆಪಿಟಿಸಿಎಲ್ ನಿಯಮಗಳ ಪ್ರಕಾರ ಮನೆಗಳ ಮೇಲೆ ನಾಲ್ಕು ಮೀಟರ್ ಎತ್ತರದಲ್ಲಿ ವಿದ್ಯುತ್ ವೈರ್ ಇರಬೇಕಿತ್ತು. ಆದರೆ ಈ ಘಟನೆ ನಡೆದ ಸ್ಥಳದಲ್ಲಿದ್ದ ಕಟ್ಟಡ ಮೇಲೆ ನಾಲ್ಕು ಮೀಟರ್ ಕ್ಲಿಯರೆನ್ಸ್ ಇರಲಿಲ್ಲ. ಈ ಬಗ್ಗೆ ಕಟ್ಟಡ ಮಾಲೀಕರಿಗೆ ಈ ಹಿಂದೆ ನೋಟಿಸ್ ಕೂಡ ಕೊಟ್ಟಿದ್ದೆವು. ಆದರೆ ಮನೆ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಘಟನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕಾ ಹಾಗೂ ಉಪ-ಮೇಯರ್ ಭದ್ರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮೇಯರ್ ಗಂಗಾಂಭಿಕೆ ಮಾತನಾಡಿ, ಇಲ್ಲಿನ ಕಟ್ಟಡಗಳು ಹೈಟೆನ್ಷನ್ ವಯರ್ ಗೆ ಸಮೀಪವಿದೆ. 4 ಅಡಿಯಷ್ಟು ಅಂತರವಿಲ್ಲ. ಹಾಗಾಗಿ ಆ ಭಾಗದಲ್ಲಿ ಯಾರೇ ಹೋದರೂ ಕರೆಂಟ್ ಶಾಕ್ ಹೊಡಿಯುವುದು ಖಂಡಿತ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಇಂದು ಲಿಖಿತ್(14) ವಿದ್ಯುತ್ ತಂತಿ ತುಳಿದು, ಸದ್ಯ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ವಿದ್ಯುತ್ ಸ್ಪರ್ಶದಿಂದ ಬಾಲಕನ ದೇಹ ಶೇ.40 ರಷ್ಟು ಸುಟ್ಟು ಹೋಗಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.
ಮನೆ ಬಳಿ ಸ್ನೇಹಿತರೊಡನೆ ಲಿಖಿತ್ ಕ್ರಿಕೆಟ್ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಬಾಲ್ ಹೋಗಿತ್ತು. ಈ ವೇಳೆ ಅದನ್ನು ತರಲು ಹೋಗಿದ್ದ ಲಿಖಿತ್ ತಂತಿ ತುಳಿದು ಕೆಳಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಸ್ಥಳೀಯರು ಹಾಗೂ ಪೋಷಕರು ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.