ಮೈಸೂರು: ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲದೆ ನನ್ನನ್ನು ಅನರ್ಹ ಶಾಸಕ ಎಂದು ಟೀಕೆ ಮಾಡುತ್ತಿದ್ದಾರೆ. ನಾನು ಅನರ್ಹ ಅಲ್ಲ ನಾನು ಅರ್ಹ ಎಂದು ಟೀಕಾರರ ವಿರುದ್ಧ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಕಿಡಿ ಕಾರಿದರು.
ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಅವರು, ವಿಶ್ವನಾಥ್ ಭ್ರಷ್ಟಚಾರಿ ಅಲ್ಲ, ವಿಶ್ವನಾಥ್ ಅಸಮರ್ಥ ಅಲ್ಲ. ಹೀಗಾಗಿ ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲದೆ ನನ್ನನ್ನು ಅನರ್ಹ ಶಾಸಕ ಎಂದು ಟೀಕೆ ಮಾಡುತ್ತಿದ್ದಾರೆ. ನಾನು ಅನರ್ಹ ಅಲ್ಲ ನಾನು ಅರ್ಹ. ಎಲ್ಲ ರೀತಿಯಲ್ಲೂ ಅರ್ಹ ಎಂದು ಸಮರ್ಥಿಸಿಕೊಂಡರು.
ಹುಣಸೂರಿನಲ್ಲಿ ಮಾಜಿ ಶಾಸಕರು ಶಿಖಂಡಿ ರಾಜಕಾರಣ ಮಾಡುತ್ತಿದ್ದರು. ವಿರೋಧಿಗಳನ್ನು ಹತ್ತಿಕ್ಕಲು ದಲಿತರನ್ನು ಮುಂದೆ ಬಿಟ್ಟು, ಅವರ ವಿರುದ್ಧ ಜಾತಿ ನಿಂದನೆ ಕೇಸ್ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಎಚ್.ವಿಶ್ವನಾಥ್ ಅವರು ಮಾಜಿ ಶಾಸಕ ಎಸ್.ಚಿಕ್ಕಮಾದು ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಬೃಹತ್ ಸಮಾವೇಶ ಮಾಡುವ ಮೂಲಕ ಹುಣಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಸಮಾವೇಶದಲ್ಲಿ ಸಚಿವ ಶ್ರೀರಾಮುಲು, ಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ವಿಜಯ್‍ಶಂಕರ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಭಾಗಿಯಾಗಿದ್ದರು. ಮುನೇಶ್ವರ ಕಾವಲ್ ಮೈದಾನದಲ್ಲಿ ಸಾವಿರಾರು ಕಾರ್ಯಕರ್ತರ ನಡುವೆ ಸಮಾವೇಶ ನಡೆಸಲಾಯಿತು.
ಎರಡು ನಾಮಪತ್ರ ಸಲ್ಲಿಕೆ
ಹೆಚ್.ವಿಶ್ವನಾಥ್ ಅವರು ಹುಣಸೂರು ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಒಂದೇ ದಿನ ಎರಡೆರಡು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.30ರ ಸಂದರ್ಭದಲ್ಲಿ ಮೊದಲ ನಾಮಪತ್ರ ಸಲ್ಲಿಸಿದ್ದರು. ನಂತರ 2.45ರಲ್ಲಿ ಸಚಿವ ಶ್ರೀರಾಮುಲು ಜೊತೆ ಸೇರಿ ಮೆರವಣಿಗೆಯಲ್ಲಿ ತೆರಳಿ ಎರಡನೆ ನಾಮಪತ್ರ ಸಲ್ಲಿಸಿದರು. ಎರಡು ನಾಮ ಪತ್ರ ಸಲ್ಲಿಸುವ ಮೂಲಕ ಕುತೂಹಲ ಮೂಡಿಸಿದರು.