– ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲಲ್ಲ
ಬೆಂಗಳೂರು: ಬಲವಂತವಾಗಿ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ (Micro Finance) ಕಂಪನಿಯ ಸಿಬ್ಬಂದಿ ವಿರುದ್ಧ 3 ವರ್ಷ ಇದ್ದ ಶಿಕ್ಷೆಯ ಅವಧಿಯನ್ನು 10 ವರ್ಷಕ್ಕೆ ಏರಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದರು.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಿರುಕುಳ ನೀಡಿದವರಿಗೆ 3 ವರ್ಷ ಶಿಕ್ಷೆ ಇತ್ತು. ಈಗ ಅದನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದೇವೆ. ದಂಡ ಕೂಡಾ 5 ಲಕ್ಷ ಮಾಡಿದ್ದೇವೆ. ಕಿರುಕುಳ ಕೊಡೋರಿಗೆ ಕಾನೂನಿನ ಬಿಸಿ ತಟ್ಟಬೇಕು ಎಂದರು.
Advertisement
Advertisement
ಕಾಟಾಚಾರಕ್ಕೆ ಕಾನೂನು ಮಾಡಿದ್ರೆ ಇಂತಹ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ. ಇದಕ್ಕಾಗಿ ಫೈನ್ ಮತ್ತು ಶಿಕ್ಷೆ ಎರಡನ್ನೂ ಜಾಸ್ತಿ ಮಾಡಿದ್ದೇವೆ. ಇಂತಹ ಕಠಿಣ ಕಾನೂನಿಂದ ಕಿರುಕುಳ ನಿಲ್ಲುತ್ತದೆ. ಆ ಉದ್ದೇಶದಿಂದ ಶಿಕ್ಷೆ ಪ್ರಮಾಣ ಜಾಸ್ತಿ ಮಾಡಿದ್ದೇವೆ. ರಾಜ್ಯಪಾಲರಿಗೆ ಬಿಲ್ ಕಳಿಸಿದ್ದೇವೆ. ಇವತ್ತು ಆಗುತ್ತಾ ಗೊತ್ತಿಲ್ಲ. ರಾಜ್ಯಪಾಲರು ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಅವರು ಬಂದು ನೋಡಿ ಸಹಿ ಮಾಡಿದ ಕೂಡಲೇ ಸುಗ್ರೀವಾಜ್ಞೆ ಜಾರಿ ಆಗಲಿದೆ ಎಂದು ಹೇಳಿದರು.
Advertisement
ಬಿಲ್ ವಿರುದ್ಧ ಮೈಕ್ರೋ ಫೈನಾನ್ಸ್ ಕಂಪನಿಗಳು ಕೋರ್ಟ್ಗೆ ಹೋಗಬಹುದು ಅಂತನೇ ಬಿಲ್ ಸಿದ್ಧ ಮಾಡಲು ತಡವಾಯಿತು. ಮೊದಲ ಕರಡು ಸಿದ್ಧ ಮಾಡಿದಾಗ ಈ ಬಗ್ಗೆ ಚರ್ಚೆ ಮಾಡಿದ್ದೆವು. ಮೈಕ್ರೋ ಫೈನಾನ್ಸ್ ಕಂಪನಿಗಳು ಕೋರ್ಟ್ಗೆ ಹೋಗಬಹುದು ಎಂದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತ ಸಿಎಂ ಸೂಚನೆ ನೀಡಿದ್ದರು. ಕಾನೂನು ಇಲಾಖೆಗೆ ಸೂಚನೆ ಕೊಟ್ಟರು ಸಹ ಎರಡು ದಿನ ತಡವಾಗಿದೆ. ಈಗ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕರಡು ಸಿದ್ಧ ಮಾಡಿದ್ದೇವೆ. ಕಂಪನಿಗಳು ಕೋರ್ಟ್ಗೆ ಹೋದರು ಸಹ ಸರ್ಕಾರಕ್ಕೆ ಹಿನ್ನಡೆ ಆಗುವುದಿಲ್ಲ ಎಂದು ನಾವು ಭಾವಿಸಿದ್ದೇವೆ ಎಂದು ನುಡಿದರು.
ಹಸುಗಳನ್ನ ಕದ್ದವರನ್ನ ಗುಂಡಿಟ್ಟು ಕೊಲ್ಲುತ್ತೇನೆ ಎಂಬ ಸಚಿವ ಮಂಕಾಳ್ ವೈದ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದರ ಬಗ್ಗೆ ಗೊತ್ತಾಗಲಿಲ್ಲ. ಅವರು ವೈಯಕ್ತಿಕವಾಗಿ ಏನೋ ಹೇಳಿರುತ್ತಾರೆ ಎಂದರು.
ಬೆಂಗಳೂರಿನಲ್ಲಿ ಕ್ಯೂಆರ್ ಕೋಡ್ ಮೂಲಕ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಬಗ್ಗೆ ಮಾತನಾಡಿ, ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮತಾಂತರದ ಬಗ್ಗೆ ಹಿಂದೆಯೇ ಕಾನೂನು ಮಾಡಿದ್ದೇವೆ. 2020-21ರಲ್ಲಿ ಕಾನೂನು ತಂದಿದ್ದರು. ಅದನ್ನು ವಿತ್ ಡ್ರಾ ಮಾಡುವ ಪ್ರಕ್ರಿಯೆ ಆಗಿತ್ತು. ಅದು ಯಾವ ಹಂತದಲ್ಲಿ ಇದೆ ಎಂದು ಕಾನೂನು ಇಲಾಖೆ ಬಳಿ ಕೇಳಬೇಕು. ಮತಾಂತರ ಮಾಡೋ ಬಗ್ಗೆ ನಮ್ಮ ಇಲಾಖೆಗೆ ದೂರು ಬಂದರೆ ಅಥವಾ ಬಲವಂತ ಮಾಡುತ್ತಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ವ್ಯಾಪ್ತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಹೇಳಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹಿಜಬ್‌ಗೆ ಅವಕಾಶ ನೀಡುವ ವಿಚಾರವಾಗಿ ಗೃಹ ಸಚಿವರ ಜೊತೆ ಸಭೆ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದರು. ಈ ಬಗ್ಗೆ ಸುದೀರ್ಘವಾದ ಚರ್ಚೆ ಅವಶ್ಯಕತೆ ಇದೆ. ಚರ್ಚೆ ಮಾಡಿ ಆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇನ್ನೂ ಒಂದು ತಿಂಗಳು ಪರೀಕ್ಷೆಗೆ ಸಮಯ ಇದೆ. ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪರಮೇಶ್ವರ್ ನೇತೃತ್ವದಲ್ಲಿ ಹೈಕಮಾಂಡ್ ನಾಯಕರನ್ನು ಕೆಲ ಸಚಿವರು ಭೇಟಿ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ಸುಳ್ಳು ಸುದ್ದಿಯಾಗಿದೆ. ನನಗೇ ಈ ಬಗ್ಗೆ ಗೊತ್ತಿಲ್ಲ. ಯಾರು ಇಂತಹ ಸುದ್ದಿ ಹುಟ್ಟಿ ಹಾಕುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಾನು ಯಾವುದೇ ನಿಯೋಗವನ್ನು ಹೈಕಮಾಂಡ್ ಬಳಿ ತೆಗೆದುಕೊಂಡು ಹೋಗುತ್ತಿಲ್ಲ. ಅಂತಹ ಯಾವುದೇ ರಾಜಕೀಯ ಬೆಳವಣಿಗೆಯೂ ಇಲ್ಲ. ನಾನು ಮೊನ್ನೆಯೇ ಹೇಳಿದ್ದೇನೆ. ಇಲಾಖೆ ಕೆಲಸ ಇದ್ದಾಗ ಹೋಗುತ್ತೇನೆ ಬಿಟ್ಟರೆ ಬೇರೆ ವಿಚಾರಕ್ಕೆ ನಾನು ದೆಹಲಿಗೆ ಹೋಗುವುದಿಲ್ಲ. ದೆಹಲಿಗೆ ಹೋಗಬಾರದು ಅಂತ ಏನಿಲ್ಲ. ಬ್ಯಾನ್ ಆರ್ಡರ್ ಕೂಡಾ ಇಲ್ಲ. ದೆಹಲಿಗೆ ಹೋಗುವ ಅಗತ್ಯ ಇಲ್ಲ. ಅಗತ್ಯ ಬಿದ್ದಾಗ ಹೋಗುತ್ತೇನೆ ಎಂದು ಸ್ಪಷ್ಟನೆ ನೀಡಿದರು.