ರಾಯಚೂರು: ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡಬೇಕು. ರಾಜ್ಯವನ್ನು ಒಡೆಯುವುದು ಒಳ್ಳೆಯದಲ್ಲ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.
ಜವಾಹರನಗರದ ರಾಯರ ಶಾಖಾ ಮಠದಲ್ಲಿ ಆಷಾಢ ಮಾಸ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಡಬೇಕು, ರಾಜ್ಯವನ್ನು ಒಡೆಯುವುದು ಒಳ್ಳೆಯದಲ್ಲ ಎಂದರು.
ಉತ್ತರ ಕರ್ನಾಟಕ ಭಾಗ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಡಬೇಕು. ಹಿಂದುಳಿದ ಭಾಗದ ಜನರ ಕಲ್ಯಾಣಕ್ಕೆ ಮುಂದಾಗಬೇಕು. ಮಠಾಧೀಶರಾಗಿ ನಾವು ರಾಜ್ಯ ಒಡೆಯುವ ಬಗ್ಗೆ ಮಾತನಾಡುವುದಿಲ್ಲ, ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ನಾವು ಆಶಿಸುತ್ತೇವೆ ಎಂದು ತಿಳಿಸಿದರು.
ಉಡುಪಿ ಶಿರೂರು ಮಠದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಅಷ್ಟಮಠದ ಯತಿಗಳು ಸಾಮರಸ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಪೊಲೀಸರು ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದರು.