ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ – ಸಿದ್ದುಗೆ ಸುನಿಲ್ ಕುಮಾರ್ ಟಾಂಗ್

Public TV
3 Min Read
sunil kumar

ಬೆಂಗಳೂರು: ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

SIDDARAMAIHA SPOKE

ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಾಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.

ಸದ್ಯ ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಅವರು, ನಾರಾಯಣ ಗುರು ಕುರಿತು ಹಾಗೂ ಅವರ ಆದರ್ಶಗಳನ್ನು ಪಠ್ಯ ಪುಸ್ತಕದಿಂದ ನಮ್ಮ ಸರ್ಕಾರವು ತೆಗೆದು ಹಾಕಿಲ್ಲ. ನಾರಾಯಣ ಗುರುಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಶ್ರದ್ದೆ, ಭಕ್ತಿ ಇದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿನಾಕಾರಣ ತಪ್ಪು ಮಾಹಿತಿಯನ್ನು ಸಾರ್ವಜನಿಕವಾಗಿ ಹರಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಇಂದು SSLC ಫಲಿತಾಂಶ – ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಗುಡ್‌ನ್ಯೂಸ್!

ಪದೇ ಪದೇ ನಾರಾಯಣ ಗುರುಗಳ ವಿಷಯವನ್ನು ರಾಜಕೀಯಕ್ಕೆ ಎಳೆದು ತರುವುದು ಶೋಭೆ ತರುವಂತದ್ದಲ್ಲ. ಬಲವಂತದ ಮತಾಂತರ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆಗೆ ಘನತೆವೆತ್ತ ರಾಜ್ಯಪಾಲರ ಅಂಕಿತ ದೊರೆತಿದೆ. ಇನ್ನು ಮುಂದೆ ರಾಜ್ಯದಲ್ಲಿ ಬಲವಂತದ, ಆಸೆ, ಆಮಿಷಗಳ ಮೂಲಕ ನಡೆಯುತ್ತಿದ್ದ ಮತಾಂತರಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದಿದ್ದಾರೆ.

ಭಾರತದ ಶೌರ್ಯ, ಪರಾಕ್ರಮದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿ, ತಿರುಚಿದ ಇತಿಹಾಸವನ್ನು ತಿಳಿಸುವ ಕೃತ್ಯವನ್ನು ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿತ್ತು. ಈಗ ಭಾರತದ ಯುವಕರಿಗೆ ಬೇಕಾಗಿರುವುದು ಭಾರತದ ನೈಜ ಇತಿಹಾಸವೇ ಹೊರತು ದಾಸ್ಯದ ಇತಿಹಾಸವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಅಸ್ಸಾಂನಲ್ಲಿ ಭೀಕರ ಪ್ರವಾಹ – 9 ಮಂದಿ ಸಾವು, ಸಂಕಷ್ಟದಲ್ಲಿ ಲಕ್ಷಾಂತರ ಜನ

ಆ ಇತಿಹಾಸವನ್ನು ಪಠ್ಯಕ್ರಮದಲ್ಲಿ ಜೋಡಿಸುವಂತಹ ಕಾರ್ಯವನ್ನು ತಜ್ಞರ ಸಮಿತಿ ಕೈಗೊಂಡಿರುವುದು ಸ್ವಾಗತಾರ್ಹ. ಭಾರತದ ಯುವ ಜನತೆಗೆ ಬೇಕಾಗಿರುವುದು ವಿವೇಕಾನಂದ,ವಿಜಯನಗರ, ನಾರಾಯಣ ಗುರು, ಶಂಕರಾಚಾರ್ಯರಂತಹ ದಾರ್ಶನಿಕರ ಜೀವನ ಕ್ರಮವೇ ಹೊರತು ಮೆಕಾಲೆ ಪ್ರೇರಿತ, ಮೊಘಲರ, ಟಿಪ್ಪು ಸುಲ್ತಾನರ ಇತಿಹಾಸವಲ್ಲ ಎಂದು ಟಾಂಗ್ ನೀಡಿದ್ದಾರೆ.

ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ. ಯಾವ ತಪ್ಪನ್ನು ಕಾಂಗ್ರೆಸ್ ಮಾಡಿತ್ತೋ ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *