ಉಡುಪಿ: ಅಯೋಧ್ಯೆಯಲ್ಲಿ (Ayodhya Ram Mandir) ಜನವರಿ 22ರಂದು ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನವರು (Congress) ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಒಂದು ವೇಳೆ ಕಾರ್ಯಕ್ರಮಕ್ಕೆ ಗೈರಾದರೆ ದೇಶಕ್ಕೆ ಮತ್ತು ನಮ್ಮ ಶ್ರದ್ದೆಗೆ ಅವರು ಮಾಡಿವ ಅವಮಾನವಾಗುತ್ತದೆ. ಹೀಗಾಗಿ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ದೇಶದ ಎಲ್ಲರೂ ಭಾಗವಹಿಸಬೇಕು. ಎಲ್ಲರೂ ರಾಮನ ದರ್ಶನ ಮಾಡಬೇಕು, ಇದು ನಮ್ಮ ಅಸ್ಮಿತೆಯ ಪ್ರಶ್ನೆಯಾಗಿದೆ. ಗುಲಾಮಗಿರಿಯನ್ನು ಹೋಗಲಾಡಿಸಬೇಕು. ಪಕ್ಷ ರಾಜಕಾರಣ ಬಿಟ್ಟು ಧರ್ಮವನ್ನು ಬಿಟ್ಟು ಎಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದು ಅವರು ಕೇಳಿಕೊಂಡರು. ಇದನ್ನೂ ಓದಿ: ಮೋದಿ ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ: ಯೋಗಿ ಆದಿತ್ಯನಾಥ್
ಕಾಂಗ್ರೆಸ್ 70 ವರ್ಷದಿಂದ ಅಯೋಧ್ಯೆಯ ವಿರುದ್ಧ ಹೋರಾಟ ಮಾಡಿತ್ತು. ಕಾಂಗ್ರೆಸ್ ನ ಕಪಿಲ್ ಸಿಬಲ್ (Kapil Sibal) ಅಯೋಧ್ಯೆಯ ವಿರುದ್ಧ ಕೋರ್ಟ್ ನಲ್ಲಿ ವಾದ ಮಾಡುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಆಗಬಾರದು ಎಂದು ಕಾಂಗ್ರೆಸ್ ಉದ್ದೇಶವಾಗಿತ್ತು. ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂದು ಕಾಂಗ್ರೆಸ್ ರಾಮ ಮಂದಿರ ವಿರುದ್ಧ ಇತ್ತು ಎಂದರು.
2014 ರ ನಂತರ ಕೋರ್ಟಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒದಗಿಸಲಾಯಿತು. ಕೋರ್ಟಿನಲ್ಲಿ ಜಯ ಸಿಕ್ಕಿದ್ದು, ಇದೀಗ ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಿದೆ. ಬಿಜೆಪಿ, ವಿಶ್ವಹಿಂದೂ ಪರಿಷತ್ ಯಾವುದೇ ರಾಜಕೀಯವನ್ನು ಮನಸ್ಸಲ್ಲಿ ಇಟ್ಟುಕೊಂಡಿಲ್ಲ ಎಂದರು.