ತಿರುವನಂತಪುರಂ: ಕಣ್ಮರೆಯಾದ ಗ್ರಾಮ, ಕೊಚ್ಚಿಹೋದ ರಸ್ತೆಗಳು ಮತ್ತು ಸೇತುವೆಗಳು, ನದಿಗಳಲ್ಲಿ ಹರಿಯುವ ದೇಹಗಳು…ಧಾರಾಕಾರ ಮಳೆಗೆ ಭೂಕುಸಿತ ಸಂಭವಿಸಿ ವಯನಾಡಿನ (Wayanad) ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಚೂರಲ್ಮಲಾ ಗ್ರಾಮ ಕೊಚ್ಚಿ ಹೋಗಿದೆ.
ನಸುಕಿನ ಜಾವ 2 ರಿಂದ 6 ಗಂಟೆಯ ನಡುವೆ ಮೂರು ಬಾರಿ ಭೂಕುಸಿತಗಳು ಸಂಭವಿಸಿವೆ. ಭಾರೀ ಭೂಕುಸಿತದ ನಂತರ ಚೂರಲ್ಮಲಾ (Chooralmala) ಗ್ರಾಮದ ಅಂಗಡಿಗಳು, ವಾಹನಗಳು ನಾಶವಾಗಿದೆ.
Advertisement
Advertisement
ಭೂಕುಸಿತದಿಂದ ಚೂರಲ್ಮಲಾ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ನಸುಕಿನ ಜಾವ ಜನರು ನಿದ್ದೆ ಮಾಡುವ ಸಮಯದಲ್ಲಿ ದುರಂತ ಸಂಭವಿಸಿದ ಪರಿಣಾಮ ಸಾವು ನೋವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ.
Advertisement
ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಜೊತೆಗೆ ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ. ನೂರಕ್ಕೂ ಹೆಚ್ಚು ಜನ ಗ್ರಾಮದಲ್ಲಿ ಸಿಲುಕಿದ್ದಾರೆ. ಹೆಚ್ಚಿನ ಭಾಗಕ್ಕೆ ಇನ್ನೂ ರಕ್ಷಣಾ ತಂಡ ಪ್ರವೇಶಿಸದ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
8 ಮೀಟರ್ ಉದ್ದದ ನದಿ ಜಲ ಪ್ರಳಯದ ನಂತರ ರಭಸದಿಂದ ಹರಿಯುತ್ತಿದ್ದು, ಈ ಪ್ರದೇಶಗಳ ಬೆಟ್ಟದಲ್ಲಿ ಸಣ್ಣ ಸಣ್ಣ ಭೂಕುಸಿತಗಳು ಈಗಲೂ ಸಂಭವಿಸುತ್ತಿದೆ. ಈ ಪ್ರದೇಶಗಳು ದುರ್ಗಮವಾಗಿರುವುದರಿಂದ, ಜನರು ಇನ್ನೂ ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.
ಚಾಲಿಯಾರ್ ನದಿಯ ಉಪನದಿಗಳು ಮೆಪ್ಪಾಡಿಯ ಇಳಿಜಾರಿನಲ್ಲಿ ಹುಟ್ಟಿಕೊಳ್ಳುತ್ತದೆ. ಮೆಪ್ಪಾಡಿಯ ಭೂಕುಸಿತದಿಂದ ನೀರು ಮತ್ತು ಕೆಸರು ನದಿಗೆ ಹರಿಯುತ್ತಿರುವುದರಿಂದ ಚಾಲಿಯಾರ್‌ನ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ರಭಸದಿಂದ ಹರಿಯುತ್ತಿದೆ.