ಕೇರಳದ ವಯನಾಡಿನಲ್ಲಿ (Wayanad Landslides) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ಭೀಕರ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ಸಿನಿಮಾ ನಟ, ನಟಿಯರು ಮುಂದಾಗಿದ್ದಾರೆ.
ವಯನಾಡು ಭೂಕುಸಿತ ದುರಂತದಲ್ಲಿ ಸಂಕಷ್ಟದಲ್ಲಿರುವರಿಗೆ ನೆರವಾಗಲು ಲಕ್ಷ ಲಕ್ಷ ಹಣವನ್ನು ಕೇರಳದ ಸಿಎಂ ಫಂಡ್‌ಗೆ ಸೌತ್ ನಟ, ನಟಿಯರು ದೇಣಿಗೆ ನೀಡಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ತಮಿಳು ನಟ ಸೂರ್ಯ, ಚಿಯಾನ್ ವಿಕ್ರಮ್, ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನೆರವಿಗೆ ಬಂದಿದ್ದಾರೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕಾರ್ಯವೊಂದಕ್ಕಾಗಿ ಅತಿಥಿಯಾಗಿ ಕೇರಳಕ್ಕೆ ಆಗಮಿಸಿದ್ದರು. ಆಗ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅವರ ಪ್ರೀತಿ ನೋಡಿ ನಟಿ ಧನ್ಯವಾದ ತಿಳಿಸಿದ್ದರು. ಇದೀಗ ಕೇರಳದಲ್ಲಿ ಆಗಿರುವ ಭೂಕುಸಿತ ದುರಂತ ಕಂಡು ಅಲ್ಲಿನ ಸಿಎಂ ಫಂಡ್‌ಗೆ ನಟಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyan Vikram), ಕೇರಳದ ಸಿಎಂ ಫಂಡ್‌ಗೆ 20 ಲಕ್ಷ ರೂ. ದೇಣಿಗೆ ನೀಡುವ ಮೂಲಕ ನೆರವಾಗಿದ್ದಾರೆ. ಸೂರ್ಯ (Suriya) ಮತ್ತು ಜ್ಯೋತಿಕಾ ದಂಪತಿ, ನಟ ಕಾರ್ತಿ (Karthi) ಜಂಟಿಯಾಗಿ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಸ್ಟಾರ್ ನಟ ಮಮ್ಮುಟ್ಟಿ ಮತ್ತು ಪುತ್ರ ದುಲ್ಕರ್ ಸಲ್ಮಾನ್ ಜೊತೆಯಾಗಿ 35 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಫಹಾದ್ ಫಾಸಿಲ್, ನಜ್ರಿಯಾ ಜೋಡಿ 25 ಲಕ್ಷ ರೂ. ದೇಣಿಗೆ ನೀಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.