ವಯನಾಡು: ಎತ್ತ ನೋಡಿದರೂ ಹೆಣದ ರಾಶಿ. ಪ್ರತಿ ಮನೆಯಲ್ಲೂ ಸೂತಕ. ಎತ್ತ ಕಿವಿ ಇಟ್ಟರೂ ಆಕ್ರಂದನದ್ದೇ ಸದ್ದು! ಇದರ ನಡುವೆ ಜಲಸಮಾಧಿಯಾದವರ ಮನ ಕಲುಕುವ ಕಥೆಗಳು. ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರುಳು ಹಿಂಡುವ ಕಥೆ. ಸತ್ತ ಕೆಲವರ ಬಗ್ಗೆ ಕಥೆಗಳೇ ಕೇಳುತ್ತಿಲ್ಲ. ಏಕೆಂದರೆ ಅವರ ಕಥೆ ಕೇಳಲು ಅವರ ಕುಟುಂಬದವರು ಯಾರು ಬದುಕಿಲ್ಲ- ಹೀಗಿದೆ ದೇವರ ನಾಡು ಕೇರಳದ ಸದ್ಯದ ಸ್ಥಿತಿ.
ಆ ದಂಪತಿ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿರಲಿಲ್ಲ. ಹೆಚ್ಚು ಕೂಲಿ ಒಂದಿಷ್ಟು ಹೆಚ್ಚಿನ ಸೌಕರ್ಯ ಸಿಗುತ್ತೆ ಅಂತಾ ಹುಟ್ಟೂರು ಬಿಟ್ಟು ಜಲಪ್ರಳಯವಾದ ವಯನಾಡಿನ (Wayanad) ಚೂರಲ್ಮಲಕ್ಕೆ (Chooralmala) ಬಂದು ನೆಲೆಸಿದ್ದರು. ಪತಿ ಕಾರ್ಪೆಂಟರ್, ಪತ್ನಿ ಟೀ ಎಸ್ಟೇಟ್‌ನಲ್ಲಿ ಕೂಲಿ ಕೆಲಸ. ಇಬ್ಬರು ದುಡಿದ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಿ ಚೂರಲ್ಮಲದಲ್ಲಿ ಸ್ವಂತ ಮನೆ ಕಟ್ಟಿಸಿದ್ರು. 6 ತಿಂಗಳ ಹಿಂದೆ ತಮ್ಮ ಬಂಧು ಬಾಂಧವರ ಕರೆಸಿ ಗೃಹ ಪ್ರವೇಶ ಮಾಡಿದ್ದರು. ಈಗ ಆ ಮನೆಯ ಜೊತೆಯೇ ಜಲಸಮಾಧಿ ಆಗಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್ ಹಗರಣ ಕೇಸ್; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್
Advertisement
Advertisement
ಈ ದಂಪತಿಗಳ ಹೆಸರು ರಾಜೇಂದ್ರ ಮತ್ತು ರತ್ನಮ್ಮ. ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಐರಸವಾಡಿ ಗ್ರಾಮದವರು. ಊರಲ್ಲೂ ಸ್ವಲ್ಪ ಜಮೀನಿದೆ. ನೆಂಟರಿಷ್ಟರೆಲ್ಲಾ ಊರಲ್ಲೇ ಇದ್ದಾರೆ. ಆದರೆ ಹೆಚ್ಚು ಕೂಲಿ ಸಿಗುತ್ತೆ, ಕಾಫಿ ಎಸ್ಟೇಟ್‌ನಲ್ಲಿ ಒಂದಿಷ್ಟು ಸವಲತ್ತು ಜಾಸ್ತಿ ಸಿಗುತ್ತದೆ ಎಂದು ಚೂರಲ್ಮಲಕ್ಕೆ ಬಂದು ನೆಲೆಸಿದ್ದರು. ಆದರೆ ಈಗ ತಮ್ಮ ಹೊಸ ಮನೆಯ ಜೊತೆಯೆ ಜಲಸಮಾಧಿ ಆಗಿದ್ದಾರೆ. ಇದನ್ನೂ ಓದಿ: ಗುಡ್ಡ ಕುಸಿತದಿಂದ ಶಿರಾಡಿ ಘಾಟ್ ಮತ್ತೆ ಬಂದ್ – ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿ
Advertisement
ಜಲಸಮಾಧಿಯಾದ ಕನ್ನಡಿಗರೆಲ್ಲಾ ಕೂಲಿ ಕಾರ್ಮಿಕರು!
ಜಲಪ್ರಳಯದಲ್ಲಿ ಕನ್ನಡಿಗರ (Kannadigas) ಸಾವಿನ ಪಟ್ಟಿ ಕೂಡ ದೊಡ್ಡದಾಗ್ತಿದೆ. ಇವರೆಲ್ಲಾ ಯಾಕೆ ಇಲ್ಲಿಗೆ ಬಂದಿದ್ರು, ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವಂತಹ ಅನಿವಾರ್ಯತೆ ಏನಿದೆ? ಕೇರಳದವರೇ (Kerala) ನಮ್ಮಲ್ಲಿಗೆ ಬಂದು ಬದುಕು ಕಟ್ಟಿಕೊಳ್ಳುವಾಗ ನಮ್ಮವರೇ ಯಾಕೆ ಇಲ್ಲಿಗೆ ಬಂದರು ಅಂತಾ ಕೊಂಚ ಕುತೂಹಲದಿಂದ ನೋಡಿದರೆ ನಮಗೆ ಕಾಣುವುದು ಎಸ್ಟೇಟ್ ಕೂಲಿ!
Advertisement
ಹೀಗೆ ಜಲಸಮಾಧಿಯಾದ ಬಹುತೇಕರು ಕೆಳ ಮಧ್ಯಮ ವರ್ಗದವರು. ಹಳೆ ಮೈಸೂರು ಭಾಗದವರು. ನಮ್ಮಲ್ಲಿ ಕೂಲಿ ಕಡಿಮೆ. ಅದಲ್ಲದೆ ಕೂಲಿ ಕಾರ್ಮಿಕರಿಗೆ ಕ್ವಾಟರ್ಸ್ ವ್ಯವಸ್ಥೆ ಇರಲ್ಲ. ಆದರೆ ಇಲ್ಲಿ ನಮ್ಮಲಿಗೆ ಹೋಲಿಸಿದರೆ ಟೀ ಎಸ್ಟೇಟ್ ಗಳಲ್ಲಿ ಹೆಚ್ಚು ಕೂಲಿ ಸಿಗುತ್ತೆ. ಜೊತೆಗೆ ಇತರೇ ಸೌಕರ್ಯ ಬೇರೆ. ಹೀಗಾಗಿ ಇಲ್ಲಿಗೆ ಬಂದವರ ಸಂಖ್ಯೆ ಹೆಚ್ಚು ಬದುಕು ಕಟ್ಟಿಕೊಳ್ಳಲು ಬಂದವರು ಸುಖ ನಿದ್ರೆಯಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ.