ಕೊಪ್ಪಳ: ಬಳ್ಳಾರಿ, ಕೊಪ್ಪಳ ರಾಯಚೂರು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳು ಅಕ್ರಮವಾಗಿ ನೀರು ಕಳ್ಳತನ ಮಾಡುತ್ತಿದ್ದು ಇದಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ತುಂಗಭದ್ರಾ ಜಲಾಶಯದಲ್ಲಿ ಕಾರ್ಖಾನೆಗಳು ಮೋಟಾರ್ ಅಳವಡಿಸಿ ಹಗಲು ರಾತ್ರಿ ಎನ್ನದೇ ನೀರು ಕಳ್ಳತನ ಮಾಡುತ್ತಿದಾರೆ. ಇದಕ್ಕೆ ಪುಷ್ಠಿ ಎನ್ನುವಂತೆ ತುಂಗೆಯ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಪೈಪ್ ಅಳವಡಿಸಿ ನೀರು ಕದಿಯಲಾಗುತ್ತಿದೆ.
ಕೊಪ್ಪಳ ತಾಲೂಕಿನ ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳಿಗೆ ನೀರು ಹೋಗುತ್ತಿದೆ. ಇದಕ್ಕೆ ನೇರವಾಗಿ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದ ನವೆಂಬರ್‍ನಲ್ಲಿ ಮುನಿರಾಬಾದ್‍ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎರಡನೇ ಬೆಳೆಗೆ ನೀರಿಲ್ಲ ಎಂದು ತೀರ್ಮಾನಿಸಿ ರೈತರಿಗೆ ಜನಪ್ರತಿನಿಧಿಗಳು ಶಾಕ್ ನೀಡಿದ್ದರು. ಆದರೆ ಈ ಕಡೆ ಕಾರ್ಖಾನೆಗಳಿಗೆ ನೀರು ಹೋಗುತ್ತಿರುವುದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸದ್ಯ ತುಂಗಭದ್ರಾ ಡ್ಯಾಂನಲ್ಲಿ 36 ಟಿಎಂಸಿ ನೀರಿದ್ದು, ಇದೇ ರೀತಿ ಕಾರ್ಖಾನೆಗಳು ನೀರು ಕದಿಯುತ್ತಿದ್ದರೆ ಬೇಸಿಗೆಯಲ್ಲಿ ಮೂರು ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆಯಾಗುವ ಸಾಧ್ಯತೆಯಿದೆ. ಕಾರ್ಖಾನೆಗಳು ನೀರನ್ನು ಕಳ್ಳತನ ಮಾಡುತ್ತಿದ್ದರೂ ಅಧಿಕಾರಿಗಳು ಬಂದ್ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv