ಚಿಕ್ಕಬಳ್ಳಾಪುರ: ಗ್ರಾಮದಲ್ಲಿ ಎರಡು ಸಾವಿರ ಅಡಿ ಕೊಳವೆಬಾಬಿ ಕೊರೆದರೂ ಹನಿ ನೀರು ಸಿಗೋದು ಅನುಮಾನ, ಆದರೆ ಗ್ರಾಮದ ಹೊರವಲಯದ ಗುಡ್ಡವೊಂದರ ಬಳಿ ಅಚ್ಚರಿ ಎಂಬಂತೆ 5 ಅಡಿ ಅಗೆದರೆ ಸಾಕು ನೀರು ಸಿಗುತ್ತೆ. ಇಂತಹದೊಂದು ಅಪರೂಪದ ನೀರಿನ ಸೆಲೆ ಆಂಧ್ರದ ಗಡಿಲ್ಲಿರುವ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಗುಬ್ಬೋಲಪಲ್ಲಿ ಗ್ರಾಮದ ಬಳಿ ಇದೆ.
ಇಡೀ ಜಿಲ್ಲೆಯ ಹಲವೆಡೆ ಸೇರಿದಂತೆ ಮಿಟ್ಟೇಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾವಿರದಿಂದ ಎರಡು ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುವುದು ಅಪರೂಪ. ಆದರೆ ಮಿಟ್ಟೇಮರಿ ಗ್ರಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗುಬ್ಬೋಲ್ಲಪಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ ತಪ್ಪಲಿನಲ್ಲಿ ಕೇವಲ ಐದಾರು ಅಡಿಗೆ ನೀರು ಸಿಗುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಜೌಗು ಪ್ರದೇಶವೊಂದಿದ್ದು ಸರಿ ಸುಮಾರು 10 ಅಡಿ ಆಳದ ಹಳ್ಳವೊಂದನ್ನು ಗ್ರಾಮಸ್ಥರೇ ತೆಗೆದಿದ್ದಾರೆ. ಮರುಭೂಮಿಯಲ್ಲಿ ಓಯಸಿಸ್ ಎಂಬಂತೆ ಹತ್ತಾರು ಹಳ್ಳಿಗಳ ಜನರಿಗೆ ಅಲ್ಲಿ ಜಿನುಗುವ ನೀರೇ ಜೀವಜಲವಾಗಿ ಪ್ರಾಣ ಉಳಿಸುತ್ತಿದೆ.
ಗ್ರಾಮಸ್ಥರು ತೆರೆದಿರುವ ಹಳ್ಳದಲ್ಲಿ ವರ್ಷದ 365 ದಿನವೂ ನೀರು ಜಿನುಗುತ್ತಲೇ ಇರುತ್ತದೆ ಎಂಬುದು ವಿಶೇಷ. ಹೀಗಾಗಿ ಈ ಹಳ್ಳದ ನೀರೇ ಹತ್ತಾರು ಹಳ್ಳಿಯ ಜನರಿಗೆ ಜೀವಉಳಿಸುವ ಜೀವಜಲವಾಗಿದೆ. ಪ್ರಸ್ತುತ ನಿರಂತರ ಬರ ಎದುರಾಗಿ ಸಾವಿರಾರು ಅಡಿ ಆಳ ಕೊರೆದರೂ ನೀರು ಸಿಗುವುದು ದುಸ್ಸಾಹಸ ಎಂಬಂತಾಗಿದೆ ಈ ಭಾಗದಲ್ಲಿ. ಆದರೆ ಇಲ್ಲಿ ಮಾತ್ರ 10 ಅಡಿ ಆಳದ ಹಳ್ಳದಲ್ಲಿಯೇ ನೀರು ಜಿನುಗುತ್ತಿರುವ ಪವಾಡವಾಗಿದೆ.
ರಾತ್ರಿ ವೇಳೆ ಗ್ರಾಮಸ್ಥರೇ ಕೆಲವೆಡೆ ಗುಂಡಿ ನಿರ್ಮಿಸಿ ಬರುತ್ತಿದ್ದು, ಬೆಳಗಾಗುವಷ್ಟರಲ್ಲಿ ಆ ಗುಂಡಿ ತುಂಬ ನೀರು ತುಂಬಿಕೊಂಡಿರುತ್ತದೆ. ಜಿನುಗುವ ಈ ನೀರಿಗಾಗಿ ಸುತ್ತಮುತ್ತಲ ಐದಾರು ಗ್ರಾಮಗಳ ಜನರು ಪ್ರತಿನಿತ್ಯ ಬಂದು ಬಿಂದಿಗೆಗಳ ಮೂಲಕ ಮನೆಗೆ ತುಂಬಿಸಿಕೊಂಡು ಹೋಗುತ್ತಿದ್ದಾರೆ. ರಾತ್ರಿಯಿಡೀ ಕಾದು ಕೆಲವರು ನೀರು ತುಂಬಿಕೊಂಡು ಹೋಗುವುದುಂಟು. ಸಾವಿರ ಅಡಿ ಕೊಳವೆ ಬಾವಿ ಕೊರೆದರು ಸಿಗುವ ನೀರು ಫ್ಲೋರೈಡ್ ಮಯವಾಗಿದೆ. ಹೀಗಾಗಿ ಹಲವು ಹಳ್ಳಿಗಳ ಜನ ಹಲವು ವರ್ಷಗಳಿಂದಲೂ ಕುಡಿಯಲು ಸಹ ಚಿಲುಮೆಯಲ್ಲಿ ಜಿನುಗುವ ನೀರನ್ನೆ ಬಳಕೆ ಮಾಡುತ್ತಿದ್ದಾರೆ. ಇದನ್ನು ಓದಿ: ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ