ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ.
ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ.
Advertisement
Advertisement
ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ. ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿ ಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲಿಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
Advertisement
ಒಂದೆಡೆ ಬರಗಾಲದಿಂದ ಕುಡಿಯಲು ನೀರಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲ್ಲಿಯ ಜನರಿಗೆ ಕುಡಿಯುವ ನೀರು ಹೋಗಲಿ ಬಳಸಲು ಕೂಡ ನೀರಿಲ್ಲದಂತೆ ಆಗಿದೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.