ನವದೆಹಲಿ: ತಮಿಳುನಾಡಿಗೆ ನಾಲ್ಕು ದಿನಗಳ ಕಾಲ ನಿರಂತರವಾಗಿ ನೀರು ಹರಿಸಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ.
ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ತಮಿಳುನಾಡಿಗೆ ನೀರು ಹರಿಸುವಂತೆ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ. ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಜಲಾಶಯಗಳ ಒಳ ಹರಿವು ಉತ್ತಮವಾಗಿದೆ. ಹೀಗಾಗಿ ನಾಲ್ಕು ದಿನಗಳ ಕಾಲ ನಿರಂತರವಾಗಿ ನೀರು ಹರಿಸಿ ಎಂದು ಸಮಿತಿಯ ಅಧ್ಯಕ್ಷ ನವೀನ್ ಕುಮಾರ್ ಅವರು ರಾಜ್ಯಕ್ಕೆ ಸೂಚಿಸಿದ್ದಾರೆ.
ಸಭೆಗೂ ಮುನ್ನ ತಮಿಳುನಾಡು 40.43 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿತ್ತು. ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಚರ್ಚೆನಂತರ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಲ್ಕು ದಿನ ನಿರಂತರವಾಗಿ ನೀರು ಹರಿಸುವಂತೆ ತೀರ್ಮಾನಿಸಲಾಗಿದೆ.
ಕರ್ನಾಟಕ ಜೂನ್, ಜುಲೈ ತಿಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ನೀರನ್ನು ಸಹ ಬಿಡಬೇಕಿದೆ. ಆಗಸ್ಟ್ ತಿಂಗಳಲ್ಲಿ ನೀರು ಹರಿಸುವ ಬಗ್ಗೆ ಆಗಸ್ಟ್ 13ಕ್ಕೆ ಮತ್ತೊಂದು ಸಭೆ ಕರೆಯಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
- Advertisement 3-
ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಿದ್ದರು. ಕಾವೇರಿ ಅಚ್ಚುಕಟ್ಟು ಪ್ರದೇಶದ ಮಳೆ ಪ್ರಮಾಣದ ಬಗ್ಗೆ ಹಾಗೂ ಕಾವೇರಿ ವ್ಯಾಪ್ತಿಯ ಜಲಾಶಯಗಳ ನೀರಿನ ಮಟ್ಟದ ಕುರಿತು ಸಭೆಯಲ್ಲಿ ಸಮಾಲೋಚನೆ ಚರ್ಚಿಸಲಾಗಿದೆ.