ರಾಯಚೂರು: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿಗೆ ವರದಾನವಾಗಬೇಕು. ರಾಯಚೂರಿನ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆ ಬಡರೋಗಿಗಳಿಗೆ ಅಕ್ಷರಶಃ ನರಕವಾಗಿದೆ. ಅದರಲ್ಲೂ ಗರ್ಭಿಣಿಯರು, ಬಾಣಂತಿಯರ ಕಷ್ಟವನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ನೀರಿಲ್ಲದೆ ಇಡೀ ಆಸ್ಪತ್ರೆಯೇ ಶೌಚಾಲಯದಂತಾಗಿದ್ದು, ಗಬ್ಬುವಾಸನೆ ಹೊಡೆಯುತ್ತಿದೆ. ಕುಡಿಯಲು ನೀರಿಲ್ಲ, ಶೌಚಕ್ಕೆ ತೆರಳಲು ರೋಗಿಗಳಿಗೆ ಸಾಧ್ಯವಿಲ್ಲ ಅನ್ನೋ ಕೆಟ್ಟ ಪರಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ನೀರಿನ ಭೀಕರ ಸಮಸ್ಯೆ ಎದುರಾಗಿದ್ದು. ರೋಗಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಹೊರಗಡೆ ಖಾಸಗಿಯವರು ಲೀಟರ್‍ಗೆ 30 ರೂಪಾಯಿಯಂತೆ ನೀರನ್ನ ಮಾರಾಟ ಮಾಡುತ್ತಿದ್ದಾರೆ. ಕುಡಿಯುವ ನೀರನ್ನ ಹೇಗೋ ಹೊಂದಿಸಿಕೊಂಡ್ರೆ ಇಲ್ಲಿನ ಶೌಚಾಲಯದ್ದು ಇನ್ನೂ ದೊಡ್ಡ ಕತೆಯಾಗಿದೆ. ನೀರಿಲ್ಲದೆ ಎಲ್ಲಾ ಶೌಚಾಲಯಗಳು ಗಬ್ಬುನಾರುತ್ತಿವೆ. ರೋಗಿಗಳ ಕಡೆಯವರು ಆಸ್ಪತ್ರೆ ಸುತ್ತಮುತ್ತ ಶೌಚಕ್ಕೆ ಹೋಗುತ್ತಿದ್ದಾರೆ. ಆದ್ರೆ ರೋಗಿಗಳು ನೀರಿನ ಸಮಸ್ಯೆಯಿಂದ ಎರಡೆರಡು ದಿನಗಳಾದ್ರೂ ಶೌಚಕ್ಕೆ ಹೋಗದೇ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.
ಆರು ಅಂತಸ್ತಿನ 500 ಹಾಸಿಗೆ ಆಸ್ಪತ್ರೆಯಾಗಿರುವ ರಿಮ್ಸ್ ಹಾಗೂ ಸೂಪರ್ ಸ್ಪೆಷಾಲಿಟಿ ಸೌಲಭ್ಯದ ಓಪೆಕ್ ಆಸ್ಪತ್ರೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಮೂಲ ಸೌಕರ್ಯವಿಲ್ಲದೆ ರೋಗಿಗಳು ತಮ್ಮ ರೋಗಕ್ಕಿಂತ ಇಲ್ಲಿನ ಸಮಸ್ಯೆಗಳಿಗೆ ನರಳಾಡುವಂತಾಗಿದೆ. ನಗರದಲ್ಲಿ ಅಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿರುವ ನಗರಸಭೆ ಆಸ್ಪತ್ರೆಗಳಿಗೂ ಅನಾನುಕೂಲ ಮಾಡಿದೆ. ರೋಗಿಗಳನ್ನ ಗಣನೆಗೆ ತೆಗೆದುಕೊಂಡು ನೀರಿನ ವ್ಯವಸ್ಥೆ ಮಾಡಬೇಕಾದ ರಿಮ್ಸ್ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಬಾಣಂತಿಯರು, ಗರ್ಭಿಣಿಯರಂತೂ ಆಸ್ಪತ್ರೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈಗ ಎಚ್ಚೆತ್ತಿರುವ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗೂ ಸಂಸದ ಬಿ.ವಿ.ನಾಯಕ್ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದೆ, ಇನ್ನೂ ತಮ್ಮ ಸಮಸ್ಯೆಗಳು ಏನೇ ಇದ್ರೂ ಆಸ್ಪತ್ರೆಗೆ ಸಮರ್ಪಕವಾಗಿ ನೀರು ಒದಗಿಸಬೇಕಾದ ನಗರಸಭೆ ಹಾಗೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಬೇಜವಾಬ್ದಾರಿತನ ಮೆರೆಯುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv