ಕೋಲಾರ: ಎಲ್ಲೆಡೆ ಲೋಕಸಭಾ ಚುನಾವಣೆಯದ್ದೆ ಮಾತು. ಈ ಮಧ್ಯೆ ಬೇಸಿಗೆ ಆವರಿಸಿ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿ ಅದೆಷ್ಟೋ ಹಳ್ಳಿಗಳಲ್ಲಿ ಟ್ಯಾಂಕರ್ ನೀರೇ ಆಧಾರವಾಗಿದೆ. ಆದ್ರೆ ನೀರಿನ ದಾಹ ನಿವಾರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಚುನಾವಣೆ ಗುಂಗಲ್ಲಿ ಬ್ಯುಸಿಯಾಗಿದ್ದಾರೆ.
Advertisement
ಹೌದು. ಬೇಸಿಗೆಯ ಆರಂಭದಲ್ಲೇ ಕೋಲಾರ ಜಿಲ್ಲೆಯಲ್ಲಿ ಜಲಕ್ಷಾಮ ಶುರುವಾಗಿದೆ. ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿದ್ದು, ಕುಡಿಯೋ ನೀರಿಗೆ ಜನ ಪರದಾಡ್ತಿದ್ದಾರೆ. ಒಂದೊಂದು ಕೊಡ ನೀರಿಗಾಗಿಯೂ ಊರಿಂದ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ನೀರಿನ ಸಮಸ್ಯೆ ಬಗೆಹರಿಸಲು ಎನ್‍ಆರ್‍ಇಡಬ್ಲ್ಯೂ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿ ಮೀಸಲಿಟ್ಟು, ಅಧಿಕಾರಿಗಳಿಗೆ ಸೂಚಿಸಿ ಕೈ ತೊಳೆದುಕೊಂಡಿದೆ. ಜಿಲ್ಲಾಡಳಿತವೂ 50ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ನೀರು ಕೊಡ್ತಿದೆ. ಆದ್ರೆ ಇದು ಗ್ರಾಮಸ್ಥರ ನೀರಿನ ಬವಣೆಯನ್ನು ಪರಿಹರಿಸಿಲ್ಲ.
Advertisement
Advertisement
1500ಕ್ಕೂ ಹೆಚ್ಚು ಆಳ ಕೊರೆದ ಕೆಲ ಕೊಳವೆ ಬಾವಿಗಳಲ್ಲಿ ನೀರಿದ್ದು, ಅದ್ರಲ್ಲಿ ಫ್ಲೋರೈಡ್‍ಯುಕ್ತ ನೀರು ಬರ್ತಿದೆ. ದುಡ್ಡು ಇರೋರು ಟ್ಯಾಂಕರ್ ನೀರುಗಳನ್ನು ತಗೊಳ್ತಿದ್ದಾರೆ. ಆದ್ರೆ ಬಡಜನರು ಮಾತ್ರ ಫ್ಲೋರೈಡ್‍ಯುಕ್ತ ನಿರನ್ನೇ ಕುಡಿದು ಆರೋಗ್ಯ ಹಾಳು ಮಾಡಿಕೊಳ್ತಿದ್ದಾರೆ. ಒಂದ್ಕಡೆ ಜನ ಕುಡಿಯಲೂ ನೀರಿಲ್ಲದೆ ಪರದಾಡ್ತಿದ್ರೆ, ರಾಜಕಾರಣಿಗಳು ಮಾತ್ರ ಏನೂ ತಲೆ ಕೆಡಿಸಿಕೊಂಡಿಲ್ಲ. ಲೋಕಸಭಾ ಚುನಾವಣೆ, ಟಿಕೆಟ್, ಪ್ರಚಾರ ಅಂದ್ಕೊಂಡು ಓಡಾಡ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸಗೌಡ ಆರೋಪಿಸುತ್ತಿದ್ದಾರೆ. ಚುನಾವಣೆಯಲ್ಲಿ ಮಗ್ನರಾಗಿರುವ ಜನಪ್ರತಿನಿಧಿಗಳು ಇನ್ನಾದ್ರೂ ಜನರ ಸಮಸ್ಯೆಯತ್ತ ಗಮನಹರಿಸಬೇಕಿದೆ.