ದಾವಣಗೆರೆ: ತುಂಗಭದ್ರಾ ನದಿಯಿಂದ ಪೈಪ್ ಲೈನ್ ಮುಖಾಂತರ ಜಿಲ್ಲೆಯ 22 ಕೆರೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಆ ಪೈಪ್ ಲೈನ್ ಒಡೆದು ಕಾರಂಜಿಯಂತೆ ಚಿಮ್ಮಿದೆ.
ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಬಳಿ ಪೈಪ್ ಒಡೆದು ಸಾವಿರಾರು ಲೀಟರ್ ನಷ್ಟು ನೀರು ಪೋಲಾಗಿದೆ. ಅಧಿಕಾರಿಗಳ ನಿಸ್ಕಾಳಜಿ ಬಗ್ಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳ ಯೋಜನೆ ಇದಾಗಿದ್ದು, ಕಾಮಗಾರಿ ಕಳಪೆಯಿಂದ ಪದೇ ಪದೇ ನೀರು ಪೋಲಾಗಿ ಯೋಜನೆ ಯಶಸ್ವಿಯಾಗುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿವೆ.
ಈ ಪೈಪ್‍ಲೈನ್ ತಿಂಗಳಿಗೆ ಎರಡು ಮೂರು ಬಾರಿ ಒಡೆಯುತ್ತಿದೆ. ಬರಗಾಲದಲ್ಲಿ ನೀರಿಲ್ಲದೆ ರೈತರು ಪರದಾಡುತ್ತಿರುವ ವೇಳೆ ಈ ರೀತಿಯಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಕಾರಂಜಿಯಂತೆ ಚಿಮ್ಮುತ್ತಿದ್ದ ನೀರನ್ನು ನೋಡಿ ಖುಷಿಪಡುವುದಲ್ಲದೇ ಸೆಲ್ಫಿ ತೆಗೆದುಕೊಂಡು ಮುಂದೆ ಸಾಗುತ್ತಿದ್ದಾರೆ.
ನೀರು ಪೋಲಾಗುತ್ತಿರುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕೂಡ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.