– ರಾಕಿಂಗ್ ಸ್ಟಾರ್ ದಂಪತಿಗೆ ರೈತರ ಕೃತಜ್ಞತೆ
ಕೊಪ್ಪಳ: ಜಿಲ್ಲೆಯಲ್ಲಿರೋ ಕೆರೆ ಬಾವಿ ಬತ್ತಿ ಹೋಗಿದ್ದು, ಭೀಕರ ಬರ ತಾಂಡವಾಡ್ತಿದೆ. ಹೀಗಾಗಿ ಒಂದು ಕೆರೆಯ ಹೂಳು ತೆಗೆಯುವ ಮೂಲಕ ಬರ ನೀಗಿಸಲು ನಟ ಯಶ್ ದಂಪತಿ ಮುಂದಾಗಿದ್ದಾರೆ. ಒಂದು ತಿಂಗಳ ಹಿಂದೆ ಈ ಕೆರೆಗೆ ಭೂಮಿ ಪೂಜೆ ಸಲ್ಲಿಸಿ ಹೂಳು ತೆಗೆಯಲು ಆರಂಭಿಸಿದ್ದು, ಈಗ ನೀರು ಚಿಮ್ಮುತ್ತಿದೆ. ಕೆರೆಯಲ್ಲಿ ನೀರು ಚಿಮ್ಮುತ್ತಿರೋದನ್ನು ನೋಡಿ ಜನ ಸಂತಸಪಟ್ಟಿದ್ದಾರೆ.
Advertisement
ಸುಮಾರು ಐವತ್ತು ವರ್ಷಗಳಿಂದಲೂ ಕೊಪ್ಪಳದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. 96 ಎಕರೆಯಲ್ಲಿ ತುಂಬಿರೋ ಹೂಳನ್ನ ತಗೆಯಲು ಬೆಂಗಳೂರಿನ ಯಶೋಮಾರ್ಗ ಫೌಂಡೇಶನ್ ಮುಂದಾಯ್ತು. ಕಳೆದ ಫೆಬ್ರವರಿ 28 ರಂದು ಯಶ್ ದಂಪತಿ ಕೆರೆಯಲ್ಲಿ ಹೂಳು ತಗೆಯಲು ಭೂಮಿ ಪೂಜೆ ಮಾಡಿದ್ರು. ಯಶೋಮಾರ್ಗ ಫೌಂಡೇಶನ್ 4 ಕೋಟಿ ವೆಚ್ಚದಲ್ಲಿ ಕೆರೆಯಲ್ಲಿರೋ ಹೂಳು ತಗೆದು ಮಾದರಿ ಕೆರೆಯನ್ನಾಗಿಸಲು ಸಂಕಲ್ಪ ಮಾಡಿದೆ. ಕಳೆದ ಒಂದು ತಿಂಗಳಿಂದ ಈ ಕೆರೆಯಿಂದ ಹೂಳು ತಗೆಯಲಾಗ್ತಿದೆ. ಸದ್ಯ ನಾಲ್ಕೈದು ದಿನಗಳಿಂದ ಹೂಳು ತೆಗೆಯೋ ವೇಳೆ ನೀರು ಚಿಮ್ಮಿದೆ.
Advertisement
Advertisement
ತಲ್ಲೂರು ಕೆರೆಯಲ್ಲಿ 10 ಅಡಿ ಆಳದಷ್ಟು ಅಗೆದು ಹೂಳು ತೆಗೆಯಲಾಗ್ತಿದ್ದು, ನೀರು ಜಿನುಗುತ್ತಿರೋದ್ರಿಂದ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ. ಈ ಭಾಗದಲ್ಲಿ 400 ಅಡಿ ಭೂಮಿ ಅಗೆದರೂ ಹನಿ ನೀರು ಸಿಗುತ್ತಿರಲಿಲ್ಲ. ಸತತ ಮೂರು ವರ್ಷಗಳ ಭೀಕರ ಬರದಿಂದ ಹನಿ ನೀರು ಕೂಡ ಸಿಗುತ್ತಿರಲಿಲ್ಲ. ಅಲ್ಲದೆ ಜಿಲ್ಲೆಯಲ್ಲಿರೋ ಬಹುತೇಕ ಕೆರೆಗಳು ಬರಿದಾಗಿ ಬಾಯಿ ತೆರೆದಿವೆ. ಇದೀಗ ತಲ್ಲೂರು ಕೆರೆಯಲ್ಲಿ ನೀರು ಚಿಮ್ಮುತ್ತಿರೋದ್ರಿಂದ ಕೆರೆಯಲ್ಲಿ ನೀರು ಆವರಿಸಿದೆ. ಈ ಭಾಗದಲ್ಲಿರೋ ರೈತರು ಹಾಗೂ ದನಕರುಗಳಿಗೆ ತಲ್ಲೂರು ಕೆರೆ ಆಸರೆಯಾಗಿದೆ.
Advertisement
ತಲ್ಲೂರು ಕೆರೆಯಲ್ಲಿ ನೀರು ಬಂದಿರೋದ್ರಿಂದ ಈ ಭಾಗದ ಜನರ ಮೊಗದಲ್ಲಿ ಸಂತಸ ಕಾಣ್ತಿದೆ. ಹೂಳು ತೆಗೆಯೋ ವೇಳೆ ನೀರು ಬಂದಿರೋದ್ರಿಂದ ಕೆರೆಯ ಹೂಳನ್ನ ತಗೆಯೋ ಕಾರ್ಯ ಇನ್ನಷ್ಟು ವೇಗಗೊಳಿಸಿದ್ರೆ ಕೆರೆಯಲ್ಲಿ ಇನ್ನಷ್ಟು ನೀರು ಬರಹಬುದು ಅನ್ನೋ ನಿರೀಕ್ಷೆ ರೈತರದ್ದಾಗಿದೆ. ಏನೇ ಆಗ್ಲೀ ಬತ್ತಿ ಹೋಗಿದ್ದ ಕೆರೆಯಲ್ಲಿ ನೀರು ಚಿಮ್ಮಿರೋದು ಜನರಲ್ಲಿ ಆಶ್ಚರ್ಯ ಹಾಗೂ ಸಂತಸ ತರಿಸಿದೆ.