ಬೆಂಗಳೂರು: ಕಾವೇರಿ ನೀರು ಕುಡಿಯೋಕೂ ಬೇಕು, ಮಾರೋಕು ಬೇಕು ಎಂದು ಹಿಂದಿವಾಲನೊಬ್ಬ ಗಾಂಚಲಿ ಮಾಡುತ್ತಾ ಕಾವೇರಿಗೆ ಕನ್ನ ಹಾಕಿದ್ದಾನೆ. ಇದನ್ನ ಕೇಳೋಕೆ ಹೋದರೆ ಅವಾಜ್ ಹಾಕುತ್ತಾನೆ. ಈ ವಾಟರ್ ಮಾಫಿಯಾವನ್ನು ಪಬ್ಲಿಕ್ ಟಿವಿ ತನ್ನ ರಹಸ್ಯ ಕಾರ್ಯಾಚಾರಣೆಯ ಮೂಲಕ ಬಯಲು ಮಾಡಿದೆ.
ಹೌದು. ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೆ ವಾಟರ್ ಮಾಫಿಯಾ ನಡೆಯುತ್ತಿದೆ. ಇದಕ್ಕೆ ಪಾಲಿಕೆ ಹಾಗೂ ಜಲ ಮಂಡಳಿಯ ಅಧಿಕಾರಿಗಳ ಶ್ರೀರಕ್ಷೆ ಕೂಡ ಇದೆಯಂತೆ. ಪಾಲಿಕೆಯ ಬೋರ್‍ವೆಲ್‍ನಿಂದ ರಾತ್ರೋ ರಾತ್ರಿ ಅಕ್ರಮವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ ಅನ್ನೋ ಆರೋಪ ಇದೀಗ ಕೇಳಿ ಬಂದಿದೆ.
ಲಗ್ಗೆರೆಯ ರಾಜೇಶ್ವರಿ ನಗರದ ಫ್ರೆಂಡ್ಸ್ ಸರ್ಕಲ್ ಬಳಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಇದನ್ನ ರಾಜಸ್ಥಾನ ಮೂಲದ ಅನೂಪ್ ಕುಮಾರ್ ನಡೆಸುತ್ತಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆದು ತನ್ನ ಸ್ವಂತ ಬೋರ್‍ವೆಲ್‍ನಿಂದನೇ ನೀರು ಮಾರಾಟ ಮಾಡುತ್ತಿದ್ದಾರೆ. ಆದರೆ ತನ್ನ ಮನೆಯ ಮುಂದೆಯೇ ಬಿಬಿಎಂಪಿಯ ಬೋರ್‍ವೆಲ್ ಕೂಡ ಇದೆ. ಹೀಗಾಗಿ ರಾತ್ರೋ ರಾತ್ರಿ ಬಿಬಿಎಂಪಿಯ ಬೋರ್‍ವೆಲ್‍ನಿಂದ ಅಕ್ರಮವಾಗಿ ನೀರನ್ನ, ತನ್ನ ಮನೆಯ ಸಂಪ್‍ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಅಂತ ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಸತ್ಯಾಂಶ ಬಯಲು ಮಾಡಲು ಹೋದ ಪಬ್ಲಿಕ್ ಟಿವಿ ತಂಡಕ್ಕೆ ಅನೂಪ್ ಕುಮಾರ್ ಹೆಂಡತಿ ಅವಾಜ್ ಹಾಕಿದ್ದಾರೆ. ಯಾರ ಅನುಮತಿ ತೆಗೆದುಕೊಂಡು ಬಂದಿದ್ದೀರಿ? ಯಾರು ನಿಮಗೆ ಮಾಹಿತಿ ಕೊಟ್ಟವರು? ಆ ಮಗನ ನಂಬರ್ ಕೊಡಿ ಎಂದು ಫುಲ್ ಗರಂ ಆದರು.
ಹಲವು ದಿನಗಳಿಂದ ಅಕ್ರಮವಾಗಿ ಕಾವೇರಿ ನೀರನ್ನ ಸಂಗ್ರಹಿಸಿ, ಮನೆಗಳಿಗೆ, ಮದ್ವೆ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಅನೂಪ್ ನೀರು ಮಾರಾಟ ಮಾಡುತ್ತಿದ್ದಾರೆ. ಪಾಲಿಕೆಯಿಂದಲೂ ಇದಕ್ಕೆ ಅನುಮತಿ ಸಿಕ್ಕಿದ್ದು, ತಿಂಗಳಿಗೆ 20ರಿಂದ 30 ಸಾವಿರ ವಾಟರ್ ಬಿಲ್ ಕಟ್ಟುತ್ತಾರಂತೆ. ಆದರೆ ಯಾರಿಗೂ ಅನುಮಾನ ಬಾರದಂತೆ ಪಾಲಿಕೆಯ ಬೋರ್‍ವೆಲ್‍ಗೆ ಎಕ್ಸ್ಟ್ರಾ ಪೈಪ್ ಚರಂಡಿಯೊಳಗೆ ಬಿಟ್ಟಿದ್ದಾರೆ. ಇದು ಬೆಳಕಿರುವ ತನಕ ಪಾಲಿಕೆಯ ಬೋರ್‍ವೆಲ್‍ಗೆ ಕನೆಕ್ಷನೇ ಇರಲ್ಲ. ಆದರೆ ರಾತ್ರಿ ಆಗುತ್ತಿದ್ದಂತೆ ಪೈಪ್ ಕನೆಕ್ಷನ್ ಕೊಟ್ಟು ನೀರನ್ನ ಸಂಗ್ರಹಿಸಿಟ್ಟುಕೊಳ್ದಳುತ್ತಿದ್ದಾರೆ. ಈ ಬಗ್ಗೆ ಖುದ್ದು ಪಬ್ಲಿಕ್ ಟಿವಿ ತಂಡ ಚರಂಡಿಯೊಳಗೆ ಇಳಿದಾಗ ಎಕ್ಸ್ಟ್ರಾ ವಾಟರ್ ಪೈಪ್ ಇರೋದು ಬೆಳಕಿಗೆ ಬಂದಿದೆ.
ಈ ಬಗ್ಗೆ ನೀರಿನ ಘಟಕ ನಡೆಸುತ್ತಿರುವ ಮಾಲೀಕ ಅನೂಪ್ ಕುಮಾರ್, ನಾವು ಕಾನೂನಾತ್ಮಕವಾಗಿಯೇ ಇದನ್ನು ನಡೆಸುತ್ತಿದ್ದೇವೆ. ಯಾರು ನಿಮಗೆ ಹೇಳಿದ್ದಾರೋ ಅವರ ವಿಡಿಯೋ ಮಾಡಿ ನಮಗೆ ಕೊಡಲಿ. ಆಗ ನಾನು ಉತ್ತರ ಕೊಡುತ್ತೇನೆ ಎಂದು ರಾಜಾರೋಷವಾಗಿ ಹೇಳುತ್ತಿದ್ದಾರೆ.
ಸಾವಿರಾರು ಲೀಟರ್ ಕಾವೇರಿ ನೀರನ್ನ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬಿಬಿಎಂಪಿ, ಜಲಮಂಡಳಿಯನ್ನ ಯಾಮಾರಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಆದರೆ ಈ ಬಗ್ಗೆ ತಿಳಿದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕುಡಿಯುವ ನೀರಿನ ಘಟಕಕ್ಕೆ ಬಂದು ವಿಚಾರಿಸದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಂದ ಕಿಸೆಗೆ ಕಾಸು ತುಂಬಿಸಿಕೊಳ್ಳುವಲ್ಲಿ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು ಶಾಮಿಲಾಗಿದ್ದಾರಾ ಅನ್ನೋ ಸಂಶಯ ಸದ್ಯ ಎಲ್ಲರಲ್ಲಿ ಹುಟ್ಟಿಕೊಂಡಿದೆ.