ಮಂಡ್ಯ: ಕೃಷ್ಣರಾಜಸಾಗರ ಜಲಾಶಯ (KRS Reservoir) ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಧೀರ್ಘಾವಧಿ ಬೆಳೆಗೆ ಜ.12 ರಿಂದ ಕಟ್ಟು ನೀರು ಪದ್ಧತಿಯಲ್ಲಿ ನೀರು ಬಿಡುಗಡೆ ಮಾಡಲಾಗುವುದು ಎಂದು ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಕೆ. ರಘುರಾಮನ್ ತಿಳಿಸಿದ್ದಾರೆ.
ಡಿ.30 ರಂದು ಕೃಷಿ (Agriculture) ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜ. 12ರಿಂದ ಏ.30 ರ ವರೆಗೆ ಕಟ್ಟು ಪದ್ಧತಿ ಆಧಾರದಲ್ಲಿ 18 ದಿನಗಳ ಕಾಲ ನೀರು ಹರಿಸಿ 12 ದಿನಗಳು ನಾಲೆಯಲ್ಲಿ ನೀರನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತುರುಗನೂರು ಶಾಖಾ ನಾಲೆ (Canal), ಹೆಬ್ಬಕವಾಡಿ ಶಾಖಾ ನಾಲೆ, ನಿಡಘಟ್ಟ ಶಾಖಾ ನಾಲೆ ಮತ್ತು ಸಂಪರ್ಕ ನಾಲೆಗಳನ್ನು ಹೊರತುಪಡಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದುನಿಂತಿರುವ ಧೀರ್ಘಾವಧಿ ಬೆಳೆಗೆ ನೀರು ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಮಿತವಾಗಿ ಉಪಯೋಗಿಸಬೇಕು. ಯಾವುದೇ ಹೊಸ ಬೆಳೆಗಳನ್ನು ಬೆಳೆದು ನೀರಿನ ಕೊರತೆಯಿಂದ ಹಾನಿಯಾದಲ್ಲಿ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ನಾಲಾ ಜಾಲದ ಮುಖ್ಯ ನಾಲೆ, ಶಾಖಾ ನಾಲೆಗಳಲ್ಲಿ ಮಾತ್ರ 18 ದಿನಗಳ ಕಾಲ ನೀರನ್ನು ಹರಿಸಿ, ವಿತರಣಾ ನಾಲೆ ಮತ್ತು ಉಪ ನಾಲೆಗಳಲ್ಲಿ ನಿಗದಿತ ಅವಧಿಗೆ ಹಾಗೂ ಅವಶ್ಯಕತೆಗೆ ತಕ್ಕಂತೆ ನೀರನ್ನು ಹರಿಸಲಾಗುವುದು. 4 ಕಟ್ಟು ನೀರು ಹರಿಸಿದ ನಂತರವೂ ಧೀರ್ಘಾವಧಿ ಬೆಳೆಗಳಿಗೆ ನೀರಿನ ಅವಶ್ಯಕತೆ ಕಂಡುಬಂದಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧರಿಸಿ ಮತ್ತೊಮ್ಮೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
KRS ವ್ಯಾಪ್ತಿಯ ವಿ.ಸಿ. ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಮತ್ತು ಅವಧಿ
* ಜ. 12 ರಿಂದ 30 ರ ವರೆಗೆ 18 ದಿನಗಳು
* ಫೆ. 11 ರಿಂದ ಮಾ.1 ರ ವರೆಗೆ 18 ದಿನಗಳು
* ಮಾ. 13 ರಿಂದ ಮಾ. 31 ರ ವರೆಗೆ 18 ದಿನಗಳು
* ಏ. 12 ರಿಂದ ಏ. 30 ರ ವರೆಗೆ 18 ದಿನಗಳು.



