ಬೆಳಗಾವಿ: ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ ಮಳೆರಾಯನ ಅಬ್ಬರ ಕಡಿಮೆಯಾಗಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಕಡಿಮೆಯಾದ ಕಾರಣ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‍ನಿಂದ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಗುರುವಾರವಷ್ಟೇ 45 ಸಾವಿರ ಕ್ಯೂಸೆಕ್‍ನಷ್ಟು ಒಳ ಹರಿವಿದ್ದ ನೀರು ಇಂದು 39 ಸಾವಿರ ಕ್ಯೂಸೆಕ್‍ನಷ್ಟಿದ್ದು 45 ಸಾವಿರ ಕ್ಯೂಸೆಕ್ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇನ್ನೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾಗಿದ್ದು ಭರ್ತಿಗೆ ಇನ್ನೂ 5 ಅಡಿಗಳು ಅಷ್ಟೇ ಬಾಕಿ ಇದೆ.
Advertisement
ಕೊಯ್ನಾ ಜಲಾಶಯ ಭರ್ತಿಯಾದರೆ 15 ಟಿಎಂಸಿ ನೀರನ್ನು ಹೊರಬಿಡಬಹದು ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂಬ ವದಂತಿಗಳು ಹಬ್ಬಿರುವ ಹಿನ್ನೆಲೆಯಲ್ಲಿ ಪ್ರವಾಹದ ಯಾವುದೇ ಭೀತಿ ಇಲ್ಲ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಗೀತಾ ಕೌಲಗಿ ಅವರು ನದಿ ಪಾತ್ರದ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
Advertisement
ಕೊಯ್ನಾ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿಂದ ಎಷ್ಟು ನೀರು ಬಿಟ್ಟರೂ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುವದು. 2 ಲಕ್ಷದ 50 ಸಾವಿರ ಕ್ಯೂಸೆಕ್ ನೀರು ಬಂದರೇ ಮಾತ್ರ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗುತ್ತದೆ. ಹಾಗಾಗಿ ಪ್ರವಾಹದ ಯಾವುದೇ ಆತಂಕ ಇಲ್ಲ ಎಂದು ಗೀತಾ ಕೌಲಗಿ ಅವರು ಹೇಳಿದ್ದಾರೆ.