ರಾಯಚೂರು: ಕೃಷ್ಣಾನದಿ ತುಂಬಿ ಹರಿಯುತ್ತಿರುವುದರಿಂದ ರಾಯಚೂರಿನ ಐತಿಹಾಸಿಕ ನವಲಿಯ ಜಡೆಶಂಕರಲಿಂಗೇಶ್ವರ ದೇವಸ್ಥಾನ ಜಲಾವೃತವಾಗಿದೆ.
ಲಿಂಗಸಗೂರು ತಾಲೂಕಿನ ನವಲಿ ಗ್ರಾಮದಲ್ಲಿರುವ ಜಡೆಲಿಂಗೇಶ್ವರ ದೇವಸ್ಥಾನ ತನ್ನದೇ ಆದ ಗತ ವೈಭವದಿಂದ ಪ್ರಸಿದ್ದಿ ಪಡೆದಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಕುಟುಂಬದ ಆರಾಧ್ಯ ದೈವವಾಗಿರುವ ಜಡೆಶಂಕರಲಿಂಗೇಶ್ವರ ದರ್ಶನ ಭಾಗ್ಯ ಈಗ ಭಕ್ತರಿಗೆ ಇಲ್ಲದಂತಾಗಿದೆ.
ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನಲೆ ಈಗ ದೇವಸ್ಥಾನ ಮುಳುಗಡೆಯಾಗಿದೆ. ನದಿ ನೀರಿನಿಂದ ದೇವಸ್ಥಾನ ರಕ್ಷಿಸಲು 1 ಕೋಟಿ 82 ಲಕ್ಷ ರೂಪಾಯಿ ಖರ್ಚಿನಲ್ಲಿ ಪ್ರಾಚ್ಯವಸ್ತು ಸಂರಕ್ಷಣ ಇಲಾಖೆ ತಡೆಗೋಡೆ ನಿರ್ಮಿಸಿತ್ತು. ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ದೇವಸ್ಥಾನ ಅರ್ಧದಷ್ಟು ಮುಳುಗಿದೆ, ಪೂಜಾ ಕೈಂಕರ್ಯಗಳಿಲ್ಲದೇ ದೇವಾಲಯ ಸ್ಥಬ್ಧವಾಗಿದೆ. ಪುರಾತನ ಕಲಾಕೃತಿಗಳು, ಶಾಸನಗಳು, ನೀರಿನಲ್ಲಿ ಮುಳುಗಿವೆ. ತಡೆಗೋಡೆಯಿದ್ದರೂ ನೀರು ಬಸಿದು ಪ್ರಾಂಗಣಕ್ಕೆ ನುಗ್ಗಿದೆ.
ದೇವಸ್ಥಾನ ಆಡಳಿತ ಮಂಡಳಿ ವಿದ್ಯುತ್ ಮೋಟರ್ ಮೂಲಕ ನೀರನ್ನ ಹೊರಹಾಕಲು ಚಿಂತನೆ ನಡೆಸಿದ್ದಾರೆ.