ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ನಿರಂತರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.
ಕೊಪ್ಪಳದ ಕುವೆಂಪು ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ ಧಾನ್ಯಗಳು ನೀರಿಗಾಹುತಿಯಾಗಿದೆ. ರಾತ್ರಿ ಇಡೀ ನೀರಿನಲ್ಲೇ ಇದ್ದ ಜನರು, ಮನೆಗಳಿಂದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮಳೆ ಬಂದರೆ ಪ್ರದೇಶದಲ್ಲಿ ನೀರು ತುಂಬುತ್ತದೆ ಎಂದು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.
ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಸೇತುವೆ ಮೇಲೆ ನೀರು ಬಂದಿದ್ದು, ಲಕ್ಷ್ಮೀ ಕ್ಯಾಂಪ್- ಗುಂಡೂರು ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದರು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಗುಂಡೂರು ಗ್ರಾಮಸ್ಥರು ನಿರಾಳರಾಗಿದ್ದಾರೆ. ಯಾಕೆಂದರೆ ಈ ಮೊದಲು ಗ್ರಾಮದ ಹಳ್ಳ ತುಂಬಿದರೆ ಗ್ರಾಮಕ್ಕೆ ನೀರು ನುಗ್ಗುತ್ತಿತ್ತು. ಆದರೆ ಸೇತುವೆ ನಿರ್ಮಾಣದಿಂದ ಹಳ್ಳ ನೀರು ಗ್ರಾಮಕ್ಕೆ ನುಗ್ಗದೆ ಸರಾಗವಾಗಿ ಹರಿಯುತ್ತಿದೆ. ಆದ್ದರಿಂದ ತುಂಬಿದ ಹಳ್ಳ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.