ಏರ್ ಇಂಡಿಯಾ ವಿಮಾನದೊಳಗೆ ತೊಟ್ಟಿಕ್ಕಿದ ನೀರು

Public TV
1 Min Read
air india flight

ನವದೆಹಲಿ: ಲಂಡನ್‌ನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ (Air India Flight) ಒಳಗಡೆ ನೀರು ಸೋರಿಕೆಯಾಗಿರುವ (Water Leaking) ಪ್ರಸಂಗ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಇದಕ್ಕೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಮೇಲಿರುವ ಹ್ಯಾಂಡ್ ಬ್ಯಾಗೇಜ್ ಸಂಗ್ರಹದಿಂದ ನೀರು ಹೇಗೆ ಸೋರಿಕೆಯಾಗುತ್ತಿತ್ತು ಎಂಬುದು ವೀಡಿಯೋದಲ್ಲಿ ಕಂಡುಬಂದಿದೆ.

ಈ ಬಗ್ಗೆ ಬರೆದಿರುವ ಪ್ರಯಾಣಿಕ, ಏರ್ ಇಂಡಿಯಾ.. ನಮ್ಮೊಂದಿಗೆ ಪ್ರಯಾಣಿಸಿ. ಇದು ಪ್ರಯಾಣವಲ್ಲ, ನಮ್ಮನ್ನು ತಲ್ಲೀನಗೊಳಿಸುವ ಅನುಭವ ಎಂದು ತಮಗಾದ ಅನಾನುಕೂಲತೆಯನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ 5 ಮಂದಿ ಸಾವು

ಸರ್ಕಾರದ ನಿಯಂತ್ರಣದಲ್ಲಿದ್ದ ಏರ್ ಇಂಡಿಯಾವನ್ನು 2021ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್ 70 ವರ್ಷಗಳ ಬಳಿಕ ಖರೀದಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುವ ಭರವಸೆಯನ್ನು ನೀಡಿದೆ. ಆದರೆ ನವೆಂಬರ್ 24ರಂದು ಗ್ಯಾಟ್ವಿಕ್‌ನಿಂದ ಅಮೃತಸರಕ್ಕೆ ಪ್ರಯಾಣಿಸಿದ ಎಐ169 ವಿಮಾನದಲ್ಲಾದ ಈ ಅವ್ಯವಸ್ಥೆ ಅದರ ಸೇವೆಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.

ಇದೀಗ ನಡೆದ ಅನಾನುಕೂಲತೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಏರ್ ಇಂಡಿಯಾ, ಅನಿರೀಕ್ಷಿತ ದೋಷವನ್ನು ಸರಿಪಡಿಸಲಾಗಿದೆ. ನೀರು ಸೋರಿಕೆ ವೇಳೆ ತೊಂದರೆಗೊಳಗಾಗಿದ್ದ ಪ್ರಯಾಣಿಕರನ್ನು ತಮ್ಮ ಆಸನಗಳಿಂದ ಇತರ ಖಾಲಿ ಆಸನಗಳಿಗೆ ಸ್ಥಳಾಂತರಿಸಿದ್ದೇವೆ. ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರನ್ನು ಆರಾಮದಾಯಕವಾಗಿರಿಸಲು ನಮ್ಮ ಸಿಬ್ಬಂದಿ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುವವರ ಸುರಕ್ಷತೆ ಮತ್ತು ಸೇವೆಗಳಿಗೆ ಏರ್ ಇಂಡಿಯಾ ಬದ್ಧವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬದುಕೋ ಸಾಧ್ಯತೆ ಮೊದಲೇ ತೀರಾ ಕಡಿಮೆಯಿತ್ತು – ಹಾಸನ ಮಗು ಸಾವಿನ ಪ್ರಕರಣಕ್ಕೆ ನಿಮ್ಹಾನ್ಸ್ ಸ್ಪಷ್ಟನೆ

Share This Article