ಬಳ್ಳಾರಿ: ಸಮ್ಮಿಶ್ರ ಸರ್ಕಾರ ಕೆಡವಲು ಅತೃಪ್ತರ ಜೊತೆ ಶಾಸಕ ನಾಗೇಂದ್ರ ಕೈ ಜೋಡಿಸಿದ್ದಾರೆ. ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರು ಮಾತ್ರ ನಮಗೆ ನೀರು ಕೊಡಿ ಅಂತಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಹತ್ತೂರ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ ಹತ್ತು ವರ್ಷವಾದ್ರೂ ಈವರೆಗೂ ಹನಿ ನೀರೂ ಹಂಚಿಕೆಯಾಗಿಲ್ಲ. ನೀರಿನಂತೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ರೂ ಜನರಿಗೆ ಕುಡಿಯುವ ನೀರು ದೊರೆತಿಲ್ಲ.
ಬಂಡಾಯದ ಬಾವುಟ ಹಿಡಿದ ಶಾಸಕ ನಾಗೇಂದ್ರ ಎಲ್ಲಿದ್ದಾರೆ ಎಂಬುವುದು ಕ್ಷೇತ್ರದ ಜನರಿಗೆ ಯಕ್ಷ ಪ್ರಶ್ನೆಯಾಗಿದೆ. ಅವರ ಕ್ಷೇತ್ರ ಬಳ್ಳಾರಿ ಗ್ರಾಮೀಣ ಭಾಗದ ಜನರು ಕುಡಿಯೋ ನೀರಿಲ್ಲದೆ ಪರದಾಡುತ್ತಿದ್ದಾರೆ. 7 ಹಳ್ಳಿಗಳ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು 2007ರಲ್ಲಿ ರೂಪನಗುಡಿಯಲ್ಲಿ ಕೆರೆ ನಿರ್ಮಿಸಿ ಡ್ಯಾಂ ಮೂಲಕ ಕೆರೆಗೆ ನೀರು ಹರಿಸುವ ಯೋಜನೆ ಜಾರಿಗೆ ತರಲಾಗಿತ್ತು. 3,90 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾದ ಈ ಯೋಜನೆಗೆ ಈವರೆಗೆ 5 ಕೋಟಿ 88 ಲಕ್ಷ ರೂಪಾಯಿ ಖರ್ಚಾಗಿದೆ. ಆದ್ರೆ ಜನರಿಗೆ ಇದ್ರಿಂದ ಹನಿ ನೀರು ಕೂಡ ಸಿಕ್ಕಿಲ್ಲ.
ರೂಪನಗುಡಿ ಗ್ರಾಮದ ಬಳಿ 25 ಎಕರೆ ವಿಸ್ತಾರದಲ್ಲಿ ಕೆರೆ ನಿರ್ಮಾಣ ಮಾಡಿದ್ದಾರೆ. ನಿರ್ಮಾಣವಾದ ಕೆರೆ ಅವೈಜ್ಞಾನಿಕತೆಯಿಂದ ಕೂಡಿದ್ದು, ಹನಿ ನೀರೂ ನಿಲ್ಲುತ್ತಿಲ್ಲ. ಈ ಒಂದು ಯೋಜನೆಗಾಗಿ ಪದೇ ಪದೇ ಕೋಟ್ಯಾಂತರ ರೂಪಾಯಿ ಅನುದಾನ ಬಳಕೆಯಾಗ್ತಿದ್ದು ಅಧಿಕಾರಿಗಳು ದುಡ್ಡನ್ನೆಲ್ಲಾ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮತ್ತೆ ಈಗ 3.80 ಕೋಟಿ ಅನುದಾನಕ್ಕೆ ಅಂದಾಜು ಪಟ್ಟಿ ಸಲ್ಲಿಕೆ ಮಾಡಿರುವುದು ಅಧಿಕಾರಿಗಳ ಅಕ್ರಮಕ್ಕೆ ಹಿಡಿದ ಸಾಕ್ಷಿಯಂತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv