ಬಾಗಲಕೋಟೆ: ಕಳೆದ 5 ವರ್ಷದಿಂದ ನೀರು ಬತ್ತಿದ್ದ ಕೊಳವೆಬಾವಿಯಿಂದ ಇದೀಗ ಅಚ್ಚರಿ ಎನ್ನುವಂತೆ 20 ರಿಂದ 30 ಅಡಿ ಎತ್ತರಕ್ಕೆ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ.
ಬಾದಾಮಿ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ರೆಡ್ ಝೋನ್‍ಗೆ ಇಳಿದಿತ್ತು. ಆದರೆ ಮೂರು ಬಾರಿ ಬಂದ ಪ್ರವಾಹ ಹಾಗೂ ಅತಿಯಾದ ಮಳೆಯಿಂದಾಗಿ ಬಾದಾಮಿ ತಾಲೂಕಿನಲ್ಲಿ ಇದೀಗ ಅಂತರ್ಜಲ ಮಟ್ಟ ದಿಢೀರ್ ಹೆಚ್ಚಳವಾಗಿದೆ. ನೀಲಗುಂದ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ರೈತ ದ್ಯಾವಪ್ಪ ಕಾಟನಾಯಕ ಅವರು 6 ವರ್ಷದ ಹಿಂದೆ ಸುಮಾರು 170 ಅಡಿ ಆಳದ ಕೊಳವೆಬಾವಿ ಕೊರಿಸಿದ್ದರು. ಆರಂಭದಲ್ಲಿ ನೀರು ಬಂತಾದರೂ, ಕ್ರಮೇಣ ಕೊಳವೆ ಬಾವಿಯಲ್ಲಿನ ನೀರು ಇಂಗಿತ್ತು. ಹೀಗಾಗಿ ಕೊಳವೆ ಬಾವಿಯನ್ನು ಹಾಗೆಯೇ ಬಿಡಲಾಗಿತ್ತು. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ನೀಲಗುಂದ ಸುತ್ತಲೂ ಅಂತರ್ಜಲಮಟ್ಟ ಹೆಚ್ಚಳವಾಗಿದೆ.
Advertisement
Advertisement
ಕಳೆದ 5 ವರ್ಷಗಳಿಂದ ನೀರಿಲ್ಲದೆ ಒಣಗಿದ್ದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ. ಹೀಗಾಗಿ ನೀರು ಚಿಮ್ಮುತ್ತಿರುವುದನ್ನು ಕಣ್ತುಂಬಿಕೊಳ್ಳಲು ಸುತ್ತಲಿನ ಹಳ್ಳಿಗಳ ಜನರು ನೀಲಗುಂದಕ್ಕೆ ಬರುತ್ತಿದ್ದಾರೆ. ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ನೀರು ನೋಡಿ ಖುಷಿಪಟ್ಟಿದ್ದಾರೆ. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.