ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಶಾಕ್ ಕೊಡಲು ಮುಂದಾಗಿದೆ. ತೆರಿಗೆ ಬಾಕಿದಾರರ ಮನೆಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರು ಮತ್ತು ವಿದ್ಯುತ್ ಕಡಿತಗೊಳ್ಳಲಿದೆ. ಏಕೆಂದರೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಬಿಬಿಎಂಪಿ ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಆಸ್ತಿ ತೆರಿಗೆ ಬಿಬಿಎಂಪಿಗೆ ಪ್ರಮುಖ ಆದಾಯದ ಮೂಲ. ಪ್ರತಿ ವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಜಾನೆ ಸೇರುತ್ತಿಲ್ಲ. ಪ್ರಸಕ್ತ ವರ್ಷದಲ್ಲಿ 3500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆಯ ಮುಂದಿದ್ದು, ಇಲ್ಲಿಯವರಗೆ 2400 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಗುರಿ ತಲುಪಲು ಇನ್ನು 1100 ಕೋಟಿ ರೂ. ಸಂಗ್ರಹವಾಗಬೇಕಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಲ್ಲಿ ಬಹುತೇಕರು ಶ್ರೀಮಂತರು ಎನ್ನಲಾಗಿದೆ. ಸಕಾಲಕ್ಕೆ ಬಿಬಿಎಂಪಿಗೆ ಬರಬೇಕಾದ ತೆರಿಗೆ ಸಂಗ್ರಹವಾಗದೇ ಇರುವುದು ಪಾಲಿಕೆಯ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.
Advertisement
Advertisement
ದೊಡ್ಡ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಎಷ್ಟು ಬಾರಿ ನೋಟಿಸ್ ನೀಡಿದರೂ ತೆರಿಗೆ ಕಟ್ಟುವುದಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತಿರೋ ಅಧಿಕಾರಿಗಳು ಮೇಯರ್ ಬಳಿ ವಾಸ್ತವತೆಯನ್ನು ವಿವರಿಸಿ ಕಠಿಣ ಕ್ರಮಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಮೇಯರ್ ಗೌತಮ್ ಕುಮಾರ್ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮನೆಗಳಿಗೆ ನೀರು ಮತ್ತು ಕರೆಂಟ್ ಪೂರೈಸದಂತೆ ಮನವಿ ಮಾಡಿದ್ದಾರೆ. ಇದಕ್ಕೆ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Advertisement
ಮೊದಲ ಹಂತವಾಗಿ ಪ್ರತಿ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ತಲಾ 20 ಆಸ್ತಿ ಮಾಲೀಕರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಸಿದ್ಧತೆ ನಡೆಸಿದೆ. 8 ವಲಯಗಳಿಂದ ಅತೀ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 160 ಆಸ್ತಿ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸೋದಾಗಿ ಮೇಯರ್ ಮುಂದಾಗಿದ್ದಾರೆ ಎನ್ನಲಾಗಿದೆ.