ಶಿವಮೊಗ್ಗ: ಪ್ರವಾಸಿಗರನ್ನು ಸೆಳೆಯಲು ಸಿಗಂದೂರು (Sigandur) ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ (Sharavati Backwater) ಭಾಗದಲ್ಲಿ ವಾಟರ್ ಏರೋಡ್ರೋಮ್ (Water Aerodrome Project) ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜಿಸಿದೆ.
ಕರ್ನಾಟಕದ 7 ಕಡೆ ಉಡಾನ್ ಯೋಜನೆ ಅಡಿ ವಾಟರ್ ಏರೋ ಡ್ರೋಮ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಉಡುಪಿಯ ಬೈಂದೂರು, ಮಲ್ಪೆ, ಉತ್ತರ ಕನ್ನಡ ಜಿಲ್ಲೆಯ ಸೂಪಾ ಡ್ಯಾಮ್‌ನ ಗಣೇಶಗುಡಿ, ಮೈಸೂರಿನ ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿ ಸೇತುವೆ ಸಮೀಪ, ಮಂಗಳೂರು ಮತ್ತು ಸಿಗಂದೂರು ಸಮೀಪ ವಾಟರ್ ಏರೋ ಡ್ರೋಮ್ ಸ್ಥಾಪನೆಗೆ ಯೋಜಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ
ಏನಿದು ವಾಟರ್ ಏರೋಡ್ರೋಮ್?
ನೀರಿನ ಮೇಲೆ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಇದನ್ನು ವಾಟರ್ ಏರೋ ಡ್ರೋಮ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಭಾಗ, ಕರಾವಳಿ ಪ್ರದೇಶಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲಾಗುತ್ತದೆ. ಉಡಾನ್ 5.5 ಯೋಜನೆ ಅಡಿ ವಾಟರ್ ಏರೋಡ್ರೋಮ್‌ಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದ 7 ಸ್ಥಳಗಳ ಪೈಕಿ ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್ ಏರೋ ಡ್ರೋಮ್ ಸ್ಥಾಪನೆಗೆ ಕಂಪನಿಗಳು ಮುಂದೆ ಬಂದಿವೆ. ಉಳಿದೆಡೆಗೆ ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ.
ಸಿಗಂದೂರಿಗೆ ಹೆಚ್ಚಾದ ಪ್ರವಾಸಿಗರು
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಹಿಂದೆ ಲಾಂಚ್‌ನಲ್ಲಿ ಶರಾವತಿ ನದಿ ದಾಟಿ ಭಕ್ತರು ದೇಗುಲಕ್ಕೆ ಹೋಗಿ ಬರುತ್ತಿದ್ದರು. ಈಗ ಸೇತುವೆ ನಿರ್ಮಾಣವಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದರ ಮಧ್ಯೆ ಸಿಗಂದೂರು ಸೇತುವೆ ಆಚೀಚೆ ಲಾಂಚ್‌ನಲ್ಲಿಯೇ ಹೊಟೇಲ್ ಆರಂಭಿಸುವ ಕುರಿತು ಚರ್ಚೆಗಳ ಚಾಲ್ತಿಯಲ್ಲಿವೆ. ಇತ್ತ ಕೇಂದ್ರ ಸರ್ಕಾರ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸುವ ಯೋಜನೆ ರೂಪಿಸಿದ್ದು ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ – ಪೊಲೀಸರಿಂದ ಪುಂಡನಿಗೆ ದಂಡದ ರುಚಿ!