– ಆರ್‌ಎಸ್‌ಎಸ್‌ಗೆ ಯಾವುದೇ ರಾಜಕೀಯ ನಂಟಿಲ್ಲ ಎಂದ ಸಂಘದ ಮುಖ್ಯಸ್ಥ
ನವದೆಹಲಿ: ಬಿಜೆಪಿ ದೃಷ್ಟಿಕೋನದಿಂದ ಆರ್‌ಎಸ್‌ಎಸ್ ಅನ್ನು ನೋಡುವುದು ಅಥವಾ ಹೋಲಿಕೆ ಮಾಡುವುದು ದೊಡ್ಡ ಪ್ರಮಾದ. ಆರ್‌ಎಸ್‌ಎಸ್‌ಗೆ ಯಾವುದೇ ರಾಜಕೀಯ ನಂಟಿಲ್ಲ ಅಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಸಂಘ ಪರಿವಾರವನ್ನು ಸೇವಾ ಸಂಘಟನೆ ಅಂತಲೂ ಅಥವಾ ರಾಜಕೀಯ ಸಂಸ್ಥೆ ಅಂತಲೂ ನೋಡಬಾರದು. ಒಂದೊಮ್ಮೆ ಆ ದೃಷ್ಟಿಯಲ್ಲಿ ನೋಡೋದಾದರೆ ಆರ್‌ಎಸ್‌ಎಸ್ ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಜವಾಗಿಯೂ ಅವರು ಎಡವಿದಂತೆಯೇ ಸರಿ. ಸಂಘದಂತಹ ಮತ್ತೊಂದು ಸಂಘಟನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಗಣವೇಷದಲ್ಲಿ ಪಥಸಂಚಲನ ಮಾಡ್ತೇವೆ. ಇದನ್ನು ನೋಡಿ ಇದು ಪ್ಯಾರಾ ಮಿಲಿಟರಿ ಸಂಘಟನೆ ಅಂತ ಭಾವಿಸುವುದು ತಪ್ಪು. ಸರ್ಕಾರದಿಂದ ಯಾವುದೇ ನೆರವು ಇಲ್ಲದೇ ದೇಶಾದ್ಯಂತ ಸೇವೆ ಮಾಡ್ತೇವೆ. ಸಂಘದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ರಾಜಕೀಯದಲ್ಲೂ ಇದ್ದಾರೆ. ಕೆಲವರು ಆಡಳಿತದಲ್ಲೂ ಇದ್ದಾರೆ. ಸಂಘವನ್ನು ಬಿಜೆಪಿ ಜೊತೆ ಹೋಲಿಸೋದು ಕೆಲವರ ಪ್ರವೃತ್ತಿಯಾಗಿದೆ. ಇದು ಅತಿದೊಡ್ಡ ತಪ್ಪು ಅಂತ ಭಾಗವತ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನ ಆರ್‌ಎಸ್‌ಎಸ್ ಮುಖ್ಯಸ್ಥರು ಖಂಡಿಸಿದ್ದಾರೆ.

